ಬೆಂಗಳೂರು:ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಗಳ ತೆರಿಗೆ ವಸೂಲಿ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ ಹಾಗೂ ತೆರಿಗೆ ವಂಚಕರ ಪತ್ತೆಗಾಗಿ ಡ್ರೋನ್ ಸರ್ವೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಾಲಿಕೆ ವಿಶೇಷ ಆಯುಕ್ತ ದೀಪಕ್ ತಿಳಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ₹2,093 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ ₹1,170 ಕೋಟಿ ಸಂಗ್ರಹವಾಗಿದ್ದು, ಶೇಕಡಾ 30ರಷ್ಟು ವ್ಯತ್ಯಾಸ ಕಂಡು ಬಂದಿದೆ ಎಂದರು.
ತೆರಿಗೆ ಸಂಗ್ರಹಕ್ಕೆ ಡ್ರೋನ್ ಸರ್ವೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಂದಾಯ ಅಧಿಕಾರಿಗಳಿಗೆ ಗುರಿ ನೀಡಿ ತೆರಿಗೆ ವಸೂಲಿ ಮಾಡಲಾಗುವುದು. ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ತಪ್ಪು ಮಾಹಿತಿ ನೀಡಿದರೆ ಡ್ರೋನ್ ಸಮೀಕ್ಷೆಯಲ್ಲಿ ಗೊತ್ತಾಗಲಿದೆ ಎಂದು ಅವರು ಹೇಳಿದರು.
ಆಸ್ತಿ ತಂತ್ರಾಂಶ ಜಾರಿಗೆ ಪಾಲಿಕೆಯಿಂದ ಚಿಂತನೆ:ಆಸ್ತಿ ತಂತ್ರಾಂಶ ಜಾರಿಗೆ ಬಿಬಿಎಂಪಿ ಚಿಂತಿಸಿದೆ. ಬೆಂಗಳೂರು ಒನ್ ಸೆಂಟರ್ಗಳ ಮೂಲಕ ತಂತ್ರಾಂಶ ಬಳಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಆಸ್ತಿಯ ಮಾಹಿತಿ ಇಲ್ಲಿ ಸಿಗಲಿದೆ. ಮುಂದಿನ ದಿನಗಳಲ್ಲಿ ಖಾತಾ ನೇರವಾಗಿ ಡಿಜಿಲಾಕರ್ ವ್ಯವಸ್ಥೆ ಜಾರಿಗೆ ಬರಲಿದ್ದು, ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಮೊದಲು ಪ್ರಯೋಗ ಆರಂಭಿಸಲಾಗುತ್ತಿದೆ.