ಬೆಂಗಳೂರು:ಬೆಳಗ್ಗೆಯಿಂದ ಪಟ್ಟು ಬಿಡದೆ, ಬಿಬಿಎಂಪಿ ಆವರಣದಲ್ಲಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ನಡೆಸಿದ ಪ್ರತಿಭಟನೆಗೆ ಬಿಬಿಎಂಪಿ ಮಣಿದಿದೆ. ಹಲವು ನಿಯಮಗಳನ್ನು ಸಡಿಲಿಕೆ ಮಾಡಿ, ಮೌಖಿಕ ಭರವಸೆ ನೀಡಿದೆ.
ವಾರ್ಡ್ಗೆ ಒಂದೇ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಇದ್ದ ನಿಯಮ ಸಡಿಲಿಕೆ ಮಾಡಿದೆ. ಅಲ್ಲದೆ ಮಂಡಳಿಗಳು ಬೇಡಿಕೆ ಇಡುವ ಕಲ್ಯಾಣಿಗಳಲ್ಲಿ ನಿಮಜ್ಜನಕ್ಕೆ ವ್ಯವಸ್ಥೆ ಮಾಡಲು ಪಾಲಿಕೆ ಒಪ್ಪಿದೆ.
ಸಮಿತಿ ಜೊತೆಗೆ ಹಲವು ಸುತ್ತಿನ ಸಭೆ ನಡೆಸಿದ ಬಳಿಕ ಬಿಬಿಎಂಪಿ ವಿಶೇಷ ಆಯುಕ್ತರು ತಮ್ಮ ನಿರ್ಧಾರ ತಿಳಿಸಿದರು. ಈ ಬಗ್ಗೆ ಮಾತನಾಡಿದ ವಿಶೇಷ ಆಯುಕ್ತರಾದ ರಂದೀಪ್, ವಾರ್ಡ್ಗೆ ಒಂದೇ ಮೂರ್ತಿ, ನಾಲ್ಕಡಿ ಎತ್ತರದವರೆಗೆ ಮಾತ್ರ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಇದ್ದ ನಿಯಮ ಪಾಲಿಸಲು ಕಷ್ಟ ಎಂದು ಹಲವು ಸಮಿತಿಗಳು ಮನವಿ ಮಾಡಿಕೊಂಡಿವೆ. ಈ ಹಿನ್ನೆಲೆ ಎಲ್ಲಾ ವಲಯ ಜಂಟಿ ಆಯುಕ್ತರು, ಪೊಲೀಸ್ ವರಿಷ್ಠರ ಜೊತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಚರ್ಚೆ ಮಾಡಲಾಗಿದೆ.
ಈಗಾಗಲೇ 140 ವಾರ್ಡ್ಗಳಲ್ಲಿ ಒಂದು ಮೂರ್ತಿ ಪ್ರತಿಷ್ಠಾಪನೆ ಅನುಮತಿ ನೀಡಲಾಗಿದೆ. ಉಳಿದಂತೆ 20-30 ವಾರ್ಡ್ಗಳಲ್ಲಿ ಒಂದಕ್ಕಿಂತ ಹೆಚ್ಚಿನ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಒಂದಕ್ಕಿಂದ ಹೆಚ್ಚಿನ ಮೂರ್ತಿ ಪ್ರತಿಷ್ಠಾಪನೆಗೆ ಪಾಲಿಕೆ ಮೌಖಿಕ ಅಸ್ತು ನೀಡಿದೆ. ಈ ಬೇಡಿಕೆಯನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಿದ್ದೇವೆ. ಸಾರ್ವಜನಿಕರಿಗೆ ಯಾವುದೇ ಧಕ್ಕೆ ಆಗದೆ ರೀತಿಯಲ್ಲಿ ಸುವ್ಯವಸ್ಥಿತ ಆಚರಣೆಗೆ ಪಾಲಿಕೆ ಸಮಿತಿ ಜೊತೆ ಕೈ ಜೋಡಿಸಲಿದೆ.