ಬೆಂಗಳೂರು:ಬಿಬಿಎಂಪಿ ಮತ್ತೆ ರಾಜಕಾಲುವೆ ಒತ್ತುವರಿ ತೆರವಿಗೆ ಕೈ ಹಾಕಿದ್ದು, ಅಕ್ರಮವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣಗಳು, ಐಷಾರಾಮಿ ಕಟ್ಟಡಗಳ ಮಾಲೀಕರಿಗೆ ನಡುಕ ಶುರುವಾಗಿದೆ.
ನಗರದಲ್ಲಿ ಮಳೆಗಾಲ ಆರಂಭವಾದಾಗ ಭಾರಿ ಅವಾಂತರಗಳು ಸೃಷ್ಟಿಯಾಗುತ್ತಿದ್ದು, ರಾಜಕಾಲುವೆ ಒತ್ತುವರಿಯಾಗಿದ್ದರಿಂದ ಈ ಅನಾಹುತಗಳು ಸಂಭವಿಸುತ್ತಿವೆ. ಆದರೆ, ಸಾಕಷ್ಟು ಅನಾಹುತ ನಡೆದ ಬಳಿಕ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವಿಗೆ ಕೈ ಹಾಕಿದೆ. ನಗರದಲ್ಲಿ ಕಾನೂನು ಬಾಹಿರವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ, ವಾಣಿಜ್ಯ ಮಳಿಗೆಗಳು ಕೈಗಾರಿಕೆಗಳು ಸೇರಿದಂತೆ ಬೆಲೆ ಬಾಳುವ ಐಷಾರಾಮಿ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಮಾಲೀಕರಿಗೆ ಶಾಕ್ ನೀಡಲಿದೆ.
ಮತ್ತೆ ಘರ್ಜಿಸಲಿದೆ ಜೆಸಿಬಿ: ರಾಜಕಾಲುವೆ ಒತ್ತುವರಿ ಮಾಡಿಕೊಂಡ ಜಾಗವನ್ನು ವಶಕ್ಕೆ ಪಡೆಯಲು ಬಿಬಿಎಂಪಿ ಭಾರಿ ತಯಾರಿ ನಡೆಸಿದ್ದು, ಪ್ರತಿಷ್ಠಿತ ಕಂಪನಿಗಳಿಗೆ ಹಾಗೂ ರಾಜಕಾಲುವೆ ಮೇಲೆ ಒತ್ತುವರಿ ಮಾಡಿಕೊಂಡು ಐಷಾರಾಮಿ ಮನೆ ಕಟ್ಟಿದವರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಹೀಗಾಗಿ, ಅಕ್ರಮವಾಗಿ ಕಟ್ಟಡ ನಿರ್ಮಿಸಿದವರಿಗೆ ನಡುಕ ಶುರುವಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ನಗರದಲ್ಲಿ ಜೆಸಿಬಿ ಘರ್ಜನೆ ಸದ್ದು ಮಾಡಿತ್ತು. ಮಳೆಯ ಪರಿಣಾಮ ಮುಳುಗಡೆಯಾದ ಪ್ರದೇಶಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮಾಡಲಾಗಿತ್ತು. ಬಳಿಕ ಬಿಬಿಎಂಪಿ ಒತ್ತುವರಿ ಕಾರ್ಯ ಅಷ್ಟಕ್ಕೇ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಎಚ್ಚೆತ್ತುಕೊಂಡ ಬಿಬಿಎಂಪಿ ಇದೀಗ ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡವರ ಮನೆಗಳಿಗೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಜೆಸಿಬಿ ನುಗ್ಗಿಸಲು ಮುಂದಾಗಿದೆ.