ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆ ಆಸ್ತಿತೆರಿಗೆ ರಿಯಾಯಿತಿ ವ್ಯಾಪ್ತಿಯನ್ನು ಬಿಬಿಎಂಪಿ ಮತ್ತೆ ಮುಂದುವರಿಕೆ ಮಾಡಿದೆ. ಈಗಾಗಲೇ ನೀಡಿದ್ದ ಏಪ್ರಿಲ್, ಮೇ ತಿಂಗಳ ರಿಯಾಯಿತಿಯನ್ನು ಜೂನ್ ತಿಂಗಳಿಗೂ ವಿಸ್ತರಿಸಲಾಗಿದೆ.
ಬಿಬಿಎಂಪಿ ಆಸ್ತಿ ತೆರಿಗೆ ರಿಯಾಯಿತಿ ವ್ಯಾಪ್ತಿ ಮತ್ತೆ ಮುಂದುವರಿಕೆ ವರ್ಷದ ಪೂರ್ಣ ಆಸ್ತಿ ತೆರಿಗೆಯನ್ನು ದಿನಾಂಕ 31-05-2021 ರ ಒಳಗೆ ಪಾವತಿಸಿದ್ದಲ್ಲಿ ಶೇಕಡ 5 ರಷ್ಟು ರಿಯಾಯಿತಿಯನ್ನು ನೀಡಲಾಗಿತ್ತು. ದೇಶದ್ಯಾಂತ ಹಾಗೂ ಬೆಂಗಳೂರು ಮಹಾನಗರದಲ್ಲಿ ಕೋವಿಡ್-19 ಸಮುದಾಯಕ್ಕೆ ವ್ಯಾಪಕವಾಗಿ ಹರಡಿದ್ದು, ಪರಿಸ್ಥಿತಿಯು ಗಂಭೀರವಾದ ಹಿನ್ನೆಲೆ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ದಿನಾಂಕ 07-06-2021 ರವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ.
ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿಯೂ ಅನಗತ್ಯವಾಗಿ ಹೊರಬಾರದಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು, ಸರ್ಕಾರದಿಂದ ಕಟ್ಟುನಿಟ್ಟಿನ ಆಜ್ಞೆ ವಿಧಿಸಲಾಗಿತ್ತು. ಇಂತಹ ಸಂದರ್ಭದಲ್ಲಿ ತೆರಿಗೆದಾರರು ಬ್ಯಾಂಕ್‌ಗಳಿಗೆ ಭೇಟಿ ನೀಡಿ ಆಸ್ತಿತೆರಿಗೆ ಪಾವತಿಸುವುದು ಕಷ್ಟಸಾಧ್ಯವಾಗಿತ್ತು.
ಆದ್ದರಿಂದ, ತೆರಿಗೆದಾರರ ಅನುಕೂಲಕ್ಕಾಗಿ ಹಾಗೂ ಪಾಲಿಕೆಯ ಆರ್ಥಿಕ ಹಿತದೃಷ್ಟಿಯಿಂದ ಆಡಳಿತಗಾರರ 28-05-2021 ರ ನಿರ್ಣಯಕ್ಕೆ ಸರ್ಕಾರವು ಇಂದು ಆದೇಶ ಹೊರಡಿಸಿ, 2021-22 ನೇ ಸಾಲಿಗೆ ಪೂರ್ಣವಾಗಿ ಆಸ್ತಿತೆರಿಗೆ ಪಾವತಿಸುವವರಿಗೆ ಶೇ.5 ರಷ್ಟು ರಿಯಾಯಿತಿ ಅವಧಿಯನ್ನು ವಿಸ್ತರಿಸಿ ದಿನಾಂಕ 30-06-2021ರ ಒಳಗಾಗಿ ಪಾವತಿಸುವ ಎಲ್ಲಾ ತೆರಿಗೆದಾರರಿಗೆ ಶೇ.5 ರಷ್ಟು ರಿಯಾಯಿತಿ ನೀಡಲು ಆದೇಶಿಸಿದೆ.
ಓದಿ:ನಮ್ಮಂತೆ 'ಕೊರೊನಾ ವಾರಿಯರ್ಸ್' ಕೂಡಾ ಬದುಕಲಿ ಎಂಬ ಸದುದ್ದೇಶ: ತುಮಕೂರಿನಲ್ಲಿ 'ಕಷಾಯ' ವಿತರಿಸಿದ ದಂಪತಿ!