ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಸಲುವಾಗಿ ವಲಯವಾರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ಸುಸ್ತಿದಾರರಿಗೆ ನೋಟಿಸ್ ಜಾರಿಗೊಳಿಸಿ ತೆರಿಗೆ ಸಂಗ್ರಹಿಸಲು ಮತ್ತು ಪ್ರಸಕ್ತ ಸಾಲಿನ ಗುರಿಯಂತೆ ಇನ್ನೂ 1,471.56 ಕೋಟಿ ರೂ ಸಂಗ್ರಹಿಸಬೇಕು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ಸಂಬಂಧ ನಡೆದ ವರ್ಚುಯಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ತುಷಾರ್ ಗಿರಿನಾಥ್ ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಸಂಗ್ರಹಿಸುವ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಈ ಸಂಬಂಧ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಗೆ ನೋಟಿಸ್ ನೀಡಿ ತೆರಿಗೆ ಸಂಗ್ರಹಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಶಿಕ್ಷಣ ಸಂಸ್ಥೆಗಳು, ಕ್ಲಬ್‌ಗಳು, ಮಾಲ್‌ಗಳಿಂದ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನ್ಯಾಯಾಯದಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳು ಇರುವ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡು ಪಾಲಿಕೆಗೆ ಪಾವತಿಸಬೇಕಿರುವ ಆಸ್ತಿ ತೆರಿಗೆಯನ್ನು ಸಂಗ್ರಹಿಸಬೇಕು. ಜೊತೆಗೆ ಬೆಸ್ಕಾಂ ದತ್ತಾಂಶದ ಆಧಾರ ಸ್ವತ್ತುಗಳನ್ನು ಪರಿಶೀಲಿಸಲಾಗುತ್ತಿದ್ದು, ಪಾಲಿಕೆಗೆ ಆಸ್ತಿತೆರಿಗೆ ದತ್ತಾಂಶದಲ್ಲಿ ವ್ಯತ್ಯಾಸ ಕಂಡು ಬಂದಂತಹ ಸ್ವತ್ತುಗಳಿಗೆ ನೋಟಿಸ್ ಜಾರಿಗೊಳಿಸಿ ವ್ಯತ್ಯಾಸದ ತೆರಿಗೆಯನ್ನು ದಂಡ ಹಾಗೂ ಬಡ್ಡಿಯೊಂದಿಗೆ ಸಂಗ್ರಹಿಸಬೇಕು. ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗದ ಆಸ್ತಿಗಳನ್ನು ವಿಶೇಷವಾಗಿ ಹೊಸದಾಗಿ ಸ್ವಾಧೀನಾನುಭವ ಪತ್ರ ಹೊಂದಿರುವ ಸ್ವತ್ತುಗಳನ್ನು ಗುರುತಿಸಿ, ಅಂತಹ ಸ್ವತ್ತುಗಳನ್ನು ಆಸ್ತಿತೆರಿಗೆ ವ್ಯಾಪ್ತಿಗೆ ತಂದು ಆಸ್ತಿತೆರಿಗೆಯನ್ನು ಸಂಗ್ರಹಿಸಬೇಕೆಂದು ಅಧಿಕಾರಿಗಳಿಗೆ ಹೇಳಿದರು.