ಬೆಂಗಳೂರು: ಕೋರಮಂಗಲ ರೆಸ್ಟೋರೆಂಟ್ನಲ್ಲಿ ಬೆಂಕಿ ಅವಘಡ ಸಂಭವಿಸಿದ ನಂತರ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಿಯಮ ಉಲ್ಲಂಘಿಸಿದ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲಿನ ಐದು ಪಬ್/ಬಾರ್‌ಗಳ ಪರವಾನಗಿಯನ್ನು ರದ್ದು ಮಾಡಿದ್ದಾರೆ.
ಹಾಗೆಯೇ ಲೋಪದೋಷಗಳು ಕಂಡುಬಂದಿರುವ ಉದ್ದಿಮೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪರವಾನಗಿ ನಿಯಮಾವಳಿ ಪಾಲಿಸದ ಉದ್ದಿಮೆಗಳನ್ನು ಸ್ಥಳದಲ್ಲೇ ಮುಚ್ಚಿಸಲಾಗಿದೆ ಎಂದು ಪಾಲಿಕೆ ಆರೋಗ್ಯ ವಿಭಾಗ ಮಾಹಿತಿ ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಲಯವಾರು ಪಬ್, ಬಾರ್ ರೆಸ್ಟೋರೆಂಟ್ಗಳಿಗೆ ಸಂಬಂಧಿಸಿದಂತೆ ಪಾಲಿಕೆಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ನ್ಯೂನ್ಯತೆಗಳಿದ್ದ ಉದ್ದಿಮೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಜೊತೆಗೆ ಪರವಾನಗಿ ನಿಯಮಾವಳಿ ಪಾಲಿಸದ ಉದ್ದಿಮೆಗಳನ್ನು ಸ್ಥಳದಲ್ಲೇ ಮುಚ್ಚಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,118 ಉದ್ದಿಮೆಗಳಿಗೆ ಪರವಾನಗಿ ನೀಡಲಾಗಿದ್ದು, ಇಂದು 79 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 26ಕ್ಕೆ ನೊಟೀಸ್ ಜಾರಿಗೊಳಿಸಲಾಗಿದೆ. ಐದು ಉದ್ದಿಮೆಗಳ ಪರವಾನಗಿ ರದ್ದು ಮಾಡಲಾಗಿದೆ ಎಂದು ಹೇಳಿದ್ದಾರೆ.
ಎಚ್ಚರಿಕೆ ನೀಡಿದ್ದ ಪಾಲಿಕೆ ಮುಖ್ಯ ಆಯುಕ್ತರು:ರೂಫ್ ಟಾಪ್‌ಗಳ ಮೇಲೆ ನಿರ್ಮಾಣ ಮಾಡಿರುವ ಬಾರ್‌ಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆ ಇರುವ ಕಾರಣ ಅಂತಹ ಕಟ್ಟಡಗಳ ಮೇಲೆ ದಾಳಿ ನಡೆಸಿ ಪರವಾನಗಿ ರದ್ದು ಮಾಡಲು ತೀರ್ಮಾನಿಸಲಾಗಿದೆ ಎಂದು ಕೆಲ ದಿನಗಳ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದರು.
ಬಿಬಿಎಂಪಿಯಿಂದ ಅನುಮತಿ ಸಿಗದಿದ್ದರೂ ಕೆಲ ಕಡೆಗಳಲ್ಲಿ ಅನಕೃತ ರೂಫ್ ಟಾಪ್ ಬಾರ್‌ಗಳನ್ನು ನಿರ್ಮಾಣ ಮಾಡಿಕೊಂಡು ಕೆಲವರು ವಾರ್ಷಿಕವಾಗಿ ಕೋಟ್ಯಂತರ ರೂ. ಆದಾಯ ಗಳಿಸುತ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿದಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿರುವುದು ಕಂಡು ಬಂದಿದೆ. ಮುಲಾಜಿಲ್ಲದೇ ರೂಫ್ ಟಾಪ್ ಬಾರ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು.
ಸಿಲಿಕಾನ್ ಸಿಟಿಯಲ್ಲಿ 200 ಕ್ಕೂ ಹೆಚ್ಚು ಬಾರ್ ಮತ್ತು ಪಬ್‌ಗಳಲ್ಲಿ ಅನಧಿಕೃತ ರೂಫ್ ಟಾಪ್ ನಿರ್ಮಾಣ ಮಾಡಲಾಗಿದೆ. ಪೂರ್ವ ಹಾಗೂ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಅನಧಿಕೃತ ರೂಫ್ ಟಾಪ್ ನಿರ್ಮಾಣವಾಗಿರುವುದು ಕಂಡು ಬಂದಿದ್ದು, ಅಂತಹವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದಿದ್ದರು.
ಕೋರಮಂಗಲ ರೆಸ್ಟೋರೆಂಟ್ನಲ್ಲಿ ಅಕ್ಟೋಬರ್ 18 ರಂದು ಬೆಂಕಿ ಅವಘಡ ಸಂಭಸಿತ್ತು. ಬೆಂಕಿಯ ಕೆನ್ನಾಲಿಗೆಗೆ ರೆಸ್ಟೋರೆಂಟ್ ಸುಟ್ಟು ಕರಕಲಾಗಿತ್ತು. ರೆಸ್ಟೋರೆಂಟ್ನಲ್ಲಿ ಒಬ್ಬ ಮೇಲಿಂದ ಕೆಳಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದು. ಅದೃಷ್ಟವಶಾತ್ ಈ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಈ ಅವಘಡದ ಬಳಿಕ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯಾಚರಣೆಗೆ ಇಳಿದಿದ್ದಾರೆ.
ಇದನ್ನೂ ಓದಿ: ಕೋರಮಂಗಲದಲ್ಲಿ ಅಗ್ನಿ ಅವಘಡ : ರೆಸ್ಟೋರೆಂಟ್ ಸುಟ್ಟು ಕರಕಲು.. ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಯುವಕ