ಬೆಂಗಳೂರು: ಮನೆ ಮೇಲೆ ಗಾಳಿಪಟ ಹಾರಿಸಲು ಹೋದ 11 ವರ್ಷದ ಬಾಲಕನಿಗೆ ಹೈಟೆನ್ಷನ್ ಲೈನ್ ತಾಕಿ ಮೃತಪಟ್ಟ ಘಟನೆ ಹಿನ್ನಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಹೈಟೆನ್ಷನ್ ಲೈನ್ ಹಾದು ಹೋಗಿರುವ ಪ್ರದೇಶಗಳಲ್ಲಿ ಅನಧಿಕೃತವಾಗಿ ಕಟ್ಟಡ ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ನೋಟೀಸ್ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಮನೆ ಮಾಲೀಕರುಗಳಿಗೆ ಆತಂಕ ಶುರುವಾಗಿದೆ. ಹೈಟೆನ್ಷನ್ ಲೈನ್ ಹಾದು ಹೋಗಿರುವ ಜಾಗದಲ್ಲಿ ಸುಮಾರು 10 ಸಾವಿರ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಈ ಮನೆಗಳನ್ನು ತೆರವುಗೊಳಿಸುವಂತೆ ಬೆಸ್ಕಾಂ ಸಂಸ್ಥೆಯವರು ಬಿಬಿಎಂಪಿಯವರಿಗೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಪರ್ಯಾಯ ವ್ಯವಸ್ಥೆ ಮಾಡುವ ಸಾಧ್ಯತೆಗಳ ಬಗ್ಗಯೂ ಚಿಂತಿನೆ ಮಾಡಲಾಗುವುದು. ಹೀಗಾಗಿ ನೋಟಿಸ್ ನೀಡಲು ನಿರ್ಧರಿಸಿದ್ದೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ.
ನಗರದಲ್ಲಿ ಹಲವೆಡೆ ಅದಕ್ಕೂ ಮೀರಿ ಕಟ್ಟಡಗಳನ್ನು ಕಟ್ಟಿಕೊಂಡಿರುವುದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ರೀತಿ ಕಾನೂನು ಉಲ್ಲಂಘಿಸಿ ಕಟ್ಟಡ ಕಟ್ಟಿಕೊಂಡಿರುವವರಿಗೂ ನೋಟೀಸ್ ನೀಡಲು ನಾವು ತೀರ್ಮಾನಿಸಿದ್ದೇವೆ. ಜೊತೆಗೆ ಬೆಸ್ಕಾಂನವರು ನೀಡಿರುವ 10 ಸಾವಿರ ಮನೆಗಳ ಸರ್ವೇ ಮಾಡಿ ದಾಖಲೆ ಪರಿಶೀಲನೆ ನಡೆಸುವಂತೆ ಎಲ್ಲಾ ವಲಯ ಮುಖ್ಯ ಅಭಿಯಂತರರಿಗೆ ಸೂಚನೆ ನೀಡಲಾಗಿದೆ ಎಂದು ರವೀಂದ್ರ ವಿವರಿಸಿದ್ದಾರೆ.
ಕಾನೂನೂ ಮೀರಿ ಅಂತಸ್ತು ನಿರ್ಮಾಣ:ತ್ವರಿತಗತಿಯಲ್ಲಿ ಬೆಸ್ಕಾಂ ಪಟ್ಟಿ ಸರ್ವೇ ಮಾಡಿ ಮಾಹಿತಿ ದಾಖಲಿಸುವಂತೆ ಪಾಲಿಕೆ ಇಂಜಿನಿಯರ್ಗಳಿಗೆ ತಾಕೀತು ಮಾಡಲಾಗಿದೆ. ಜನರು ಕಾನೂನು ಮೀರಿ ಹೆಚ್ಚುವರಿ ಅಂತಸ್ತು ನಿರ್ಮಾಣ ಮಾಡಿರುವುದರಿಂದ ಇಂತಹ ಅವಘಡಗಳು ಸಂಭವಿಸುತ್ತಿದ್ದು, ಭವಿಷ್ಯದಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ನಾವು ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆ:ಇತ್ತೀಚೆಗೆ ಬೆಂಗಳೂರಿನಲ್ಲಿ ಮನೆಯ ಟೆರೇಸ್ನಲ್ಲಿ ಗಾಳಿಪಟ ಹಾರಿಸುವಾಗ ಹೈಟೆನ್ಷನ್ ತಂತಿ ತಗುಲಿ ಬಾಲಕ ಸಾವನ್ನಪ್ಪಿರುವ ಘಟನೆ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಕಳೆದ ಸೋಮವಾರ ಸಂಭವಿಸಿತ್ತು. 12 ವರ್ಷದ ಅಬೂಬಕರ್ ಸಾವನ್ನಪ್ಪಿದ್ದರು.