ಕರ್ನಾಟಕ

karnataka

ETV Bharat / state

ಏಳು ದಿನಗಳಲ್ಲಿ ಕನ್ನಡ ನಾಮಫಲಕ ಅಳವಡಿಸದಿದ್ದರೆ ವ್ಯಾಪಾರ ಪರವಾನಿಗೆ ರದ್ದು: ಬಿಬಿಎಂಪಿ ನೋಟಿಸ್ - ಬಿಬಿಎಂಪಿ ನೋಟಿಸ್

ಏಳು ದಿನಗಳಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಹಾಕಬೇಕೆಂದು ಬಿಬಿಎಂಪಿ ನೋಟಿಸ್ ಜಾರಿಗೊಳಿಸಿದೆ.

ಕನ್ನಡ ನಾಮಫಲಕ ಸಂಬಂಧ ಬಿಬಿಎಂಪಿ ನೋಟಿಸ್ ಜಾರಿ
ಕನ್ನಡ ನಾಮಫಲಕ ಸಂಬಂಧ ಬಿಬಿಎಂಪಿ ನೋಟಿಸ್ ಜಾರಿ

By ETV Bharat Karnataka Team

Published : Jan 4, 2024, 6:05 PM IST

ಬೆಂಗಳೂರು: ರಾಜಧಾನಿಯಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆ ಸಂಬಂಧ ಹೊಸ ನಿಯಮ ಜಾರಿಗೆ ಬಿಬಿಎಂಪಿ ಮುಂದಾಗಿದ್ದು, ಏಳು ದಿನಗಳಲ್ಲಿ ನಾಮಫಲಕ ಹಾಕಬೇಕೆಂದು ನೋಟಿಸ್ ಜಾರಿಗೊಳಿಸಿದೆ. ವಾಣಿಜ್ಯ ಉದ್ದಿಮೆಗಳಿಗೆ, ಮಳಿಗೆಗಳಿಗೆ ನೋಟಿಸ್ ನೀಡಿ ಏಳು ದಿನದೊಳಗೆ ಕಾನೂನು ರೀತ್ಯಾ ನಾಮಫಲಕ ಹಾಕಬೇಕೆಂದು ಸೂಚಿಸಲಾಗಿದೆ. ಎಂಟು ವಲಯದ ಪಾಲಿಕೆ ಅಧಿಕಾರಿಗಳಿಂದ ನೋಟಿಸ್ ಜಾರಿ ಮಾಡಲಾಗಿದೆ.

ಕನ್ನಡ ನಾಮಫಲಕವನ್ನು ಶೇ. 60ರಷ್ಟು ಇರುವಂತೆ ಆಳವಡಿಸಬೇಕೆಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಏಳು ದಿನದೊಳಗೆ ನಾಮಫಲಕ ಹಾಕದೇ ಇದ್ದಲ್ಲಿ ವ್ಯಾಪಾರ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆಯನ್ನು ಬಿಬಿಎಂಪಿ ನೀಡಿದೆ.

ಫೆ.28ರೊಳಗೆ ಕನ್ನಡ ನಾಮಫಲಕ ಕಡ್ಡಾಯ:ಫೆ.28ರೊಳಗೆ ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ 60%ರಷ್ಟು ಕನ್ನಡ ಭಾಷೆ ಬಳಕೆ ಮಾಡುವಂತೆ ಸೂಚಸಿ ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕಳೆದ ವಾರ ತಿಳಿಸಿದ್ದರು. ಅಂಗಡಿ-ಮುಂಗಟ್ಟುಗಳ ಮುಂಭಾಗ ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಉನ್ನತ ಮಟ್ಟದ ಸಭೆ ಕೂಡ ನಡೆಸಲಾಗಿತ್ತು

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡದ ನಾಮಫಲಕ ಕಡ್ಡಾಯವಾಗಿ ಹಾಕಬೇಕು ಎಂದು ಬಿಬಿಎಂಪಿ ಕಳೆದ ವಾರ ಗಡುವು ನೀಡಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆಯೊಂದಿಗೆ ಮಲ್ಲೇಶ್ವರ ಐಪಿಪಿ ಸಭಾಂಗಣದಲ್ಲಿ ಸಭೆಯನ್ನು ನಡೆಸಿತ್ತು.

ಫೆ. 28ರೊಳಗಾಗಿ ನಗರದಲ್ಲಿ ಶೇ.60 ರಷ್ಟು ಕನ್ನಡ ಭಾಷೆಯ ನಾಮಫಲಕ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಮಾಲ್ ಸೇರಿದಂತೆ ಇನ್ನಿತರ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ಸಂಬಂಧ ಎಲ್ಲಾ ವಲಯ ಆಯುಕ್ತರ ಜತೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್​ ಹೇಳಿದ್ದರು.

ಕನ್ನಡ ನಾಮಫಲಕಕ್ಕೆ ಆಗ್ರಹಿಸಿ ಕರವೇ ಹೋರಾಟ:ಕನ್ನಡ ನಾಮಫಲಕಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರನ್ನು ಬಂಧಿಸಲಾಗಿತ್ತು. ಇದನ್ನು ಖಂಡಿಸಿ ನಾರಾಯಣ ಗೌಡ ಅವರ ಬಿಡುಗಡೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ:ಸಾರ್ವಜನಿಕ ಆಸ್ತಿಗೆ ಹಾನಿ: ನಾರಾಯಣ ಗೌಡ ಸೇರಿ 6 ಜನರ ವಿರುದ್ಧ ಎಫ್‌ಐಆರ್

ABOUT THE AUTHOR

...view details