ಬೆಂಗಳೂರು: ಬಿಬಿಎಂಪಿಯಲ್ಲಿ ಕಸ ನಿರ್ವಹಣೆ ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸೆ. 1ರಿಂದ ನೂತನ ಟೆಂಡರ್ ಕಸ ಸಮಸ್ಯೆಗೆ ಮುಕ್ತಿ ಹಾಡಲಿದೆ ಎಂದು ನಿರೀಕ್ಷೆಯಲ್ಲಿದ್ದ ಜನತೆಗೆ ನಿರಾಸೆಯಾಗಲಿದೆ.
ಲೋಕಸಭಾ ಚುನಾವಣೆ ಪೂರ್ವದಿಂದಲೇ ನೂತನ ಟೆಂಡರ್ ಸಿದ್ಧಪಡಿಸಿ, ಟೆಂಡರ್ ಆಹ್ವಾನಿಸಿ, ಒಟ್ಟು 160 ಟೆಂಡರ್ ಕಡತಗಳನ್ನು ಅಂತಿಮಗೊಳಿಸಲಾಗಿದೆ. ಅಧಿಕಾರಿಗಳು ತಮ್ಮ ಕಾರ್ಯ ಪೂರ್ಣಗೊಳಿಸಿದ್ದರೂ ಇದಕ್ಕೆ ಅನುಮತಿ ನೀಡಬೇಕಾದ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ನಿರ್ಲಕ್ಷ್ಯ ವಹಿಸಿದೆ ಎನ್ನಲಾಗಿದೆ. ಈ ಸಮಿತಿಯ ಅಧ್ಯಕ್ಷ, ಕಾರ್ಪೋರೇಟರ್ ಮುಜಾಹಿದ್ ಪಾಷಾ ಕೂಡಾ ಧಾರ್ಮಿಕ ಕೇಂದ್ರಕ್ಕೆ ಪ್ರವಾಸ ಹೋಗಿದ್ದಾರೆ. ಅಲ್ಲದೇ ಕೆಲವು ಲಾಬಿಗಳಿಗಾಗಿಯೇ ಟೆಂಡರ್ ಕಡತಗಳು ಪಾಸ್ ಮಾಡದೆ, ಅನಾವಶ್ಯಕ ವಿಳಂಬ ಮಾಡಲಾಗಿದೆ ಎಂದು ಹೇಳಲಾಗ್ತಿದೆ.
ಇನ್ನು ಎಲ್ಲಾ ಕಾರ್ಪೋರೇಟರ್ಗಳಿರುವ ಕೌನ್ಸಿಲ್ನಲ್ಲೂ ಈವರೆಗೆ ಟೆಂಡರ್ಗೆ ಅನುಮತಿ ಸಿಕ್ಕಿಲ್ಲ. ಈ ಎಲ್ಲಾ ಕಾರಣಗಳಿಂದ ಸೆ. 1ಕ್ಕೆ ಹೊಸ ಟೆಂಡರ್ ಜಾರಿಯಾಗೋದು ಅಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.
ಈ ಬಗ್ಗೆ ಈಟಿವಿ ಭಾರತದ ಜೊತೆ ಪಾಲಿಕೆಯ ವಿಶೇಷ ಆಯುಕ್ತ ರಂದೀಪ್ ಮಾತನಾಡಿ, ಸಮಿತಿಗೆ ಕಳಿಸಿರುವ 160 ಟೆಂಡರ್ ಕಡತಗಳಲ್ಲಿ, 35 ಕಡತಗಳಿಗೆ ಮಾತ್ರ ಒಪ್ಪಿಗೆ ಸೂಚಿಸಿದ್ದಾರೆ. ಆಯುಕ್ತರಾದ ಮಂಜುನಾಥ್ ಪ್ರಸಾದ್ ಟೆಂಡರ್ ಕಡತಗಳನ್ನು ಆದಷ್ಟು ಬೇಗ ಪಾಸ್ ಮಾಡಿಕೊಡುವಂತೆ ಪತ್ರ ಬರೆದಿದ್ದಾರೆ. ಇದು ತುರ್ತು ಅವಶ್ಯಕತೆ ಆಗಿರುವುದರಿಂದ ಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆಯಲಿದ್ದಾರೆ ಎಂದು ತಿಳಿಸಿದರು.
ಆದರೆ ಈ ಬಗ್ಗೆ ಪಾಲಿಕೆಯ ಆಡಳಿತ ಪಕ್ಷದ ಬಳಿ ಕೇಳಿದ್ರೆ ಬೇರೆಯದೇ ಸಬೂಬು ನೀಡುತ್ತಿದ್ದಾರೆ. ಹೊಸ ಸರ್ಕಾರ ಎಲ್ಲಾ ಹೊಸ ಯೋಜನೆ, ಹೊಸ ಟೆಂಡರ್ಗಳನ್ನು ಸ್ಥಗಿತ ಮಾಡಲು ಹೇಳಿರುವುದರಿಂದ ಹಸಿ ಕಸದ ಟೆಂಡರ್ ಪ್ರಕ್ರಿಯೆಗಳು, ಕಡತಗಳ ಕೆಲಸಗಳು ಅರ್ಧಕ್ಕೆ ನಿಂತಿವೆ. ಈಗಾಗಲೇ ಒಪ್ಪಿಗೆ ನೀಡಿರುವ 35 ಟೆಂಡರ್ ಕಡತಗಳಿಗೆ ಆಯುಕ್ತರು ವರ್ಕ್ ಆರ್ಡರ್ ನೀಡಲಿ, ಕೆಲಸ ಆರಂಭಿಸಲಿ. ಹೀಗಾದಲ್ಲಿ ಒಂದೇ ವಾರದಲ್ಲಿ ಎಲ್ಲಾ ಕಡತಗಳನ್ನು ಪಾಸ್ ಮಾಡಿಸಿ ಕೊಡುತ್ತೇವೆ. ಆರೋಗ್ಯ ಸ್ಥಾಯಿ ಸಮಿತಿಯಿಂದ ವಿಳಂಬವಾದ್ರೂ ಕೌನ್ಸಿಲ್ನಲ್ಲಿ ಪಾಸ್ ಮಾಡಿಸಿ ಕೊಡುತ್ತೇವೆ ಎಂದು ಆಡಳಿತ ಪಕ್ಷದ ನಾಯಕ ವಾಜಿದ್ ಹೇಳಿದರು.
ಇವೆಲ್ಲದರ ನಡುವೆ ಹೊಸ ಸರ್ಕಾರದ ಸಿಎಂ ಯಡಿಯೂರಪ್ಪ, ಹೊಸ ಯೋಜನೆಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲು ತಿಳಿಸಿರುವುದರಿಂದ ಈ ಟೆಂಡರ್ಗೆ ಹಿನ್ನಡೆಯಾಗಿದೆ. ಇದರಿಂದ ತಮ್ಮ ಅವಧಿಯಲ್ಲೇ ಕಸದ ಟೆಂಡರ್ ಜಾರಿ ಮಾಡಿದ ಕೀರ್ತಿಗೆ ಪಾತ್ರರಾಗಲಿದ್ದ ಮೇಯರ್ ಗಂಗಾಂಬಿಕೆ ಕನಸಿಗೂ ತಣ್ಣೀರೆರಚಿದಂತಾಗಿದೆ.
ಇನ್ನು ಮಿಟಗಾನಹಳ್ಳಿ ಕ್ವಾರಿಯ ತಾತ್ಕಾಲಿಕ ಟೆಂಡರ್ ಹಾಗೂ ಹಸಿಕಸದ ಟೆಂಡರ್ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಪತ್ರ ಬರೆಯಲಿದ್ದಾರೆ. ಅಷ್ಟೇ ಅಲ್ಲದೆ ಇಂದು ನಡೆಯುವ ಕೌನ್ಸಿಲ್ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಲಿದೆ. ಆದರೂ ನಗರದ ಜನ ನಿರೀಕ್ಷೆ ಇಟ್ಟುಕೊಂಡಿದ್ದ ಕಸದ ಟೆಂಡರ್ ವಿಚಾರ ಪರಸ್ಪರ ಕೆಸರೆರಚಾಟದಿಂದಲೇ ವಿಳಂಬವಾಗ್ತಿರೋದು ಮಾತ್ರ ವಿಪರ್ಯಾಸ.