ಬೆಂಗಳೂರು: ಗೌರಿ-ಗಣೇಶ ಹಬ್ಬದ ಆಚರಣೆ ಮುಂದಿನ ತಿಂಗಳಲ್ಲಿ ನಡೆಯಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಮಾಡಲು ಈ ಬಾರಿ ಅವಕಾಶ ಇಲ್ಲ. ಮನೆಯಲ್ಲೇ ಗಣೇಶ ಕೂರಿಸಿ, ಮನೆಯಲ್ಲೇ ವಿಸರ್ಜಿಸಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಆಯುಕ್ತರು, ಗಣೇಶ ಮೂರ್ತಿ ಇಟ್ಟರೆ ಮಾರಾಟವೂ ಆರಂಭವಾಗುತ್ತದೆ. ಇದರಿಂದ ಸಾಮಾಜಿಕ ಅಂತರ ಸಾಧ್ಯವಾಗುವುದಿಲ್ಲ. ನಿಯಮ ಮೀರಿಯೂ ಗಣೇಶ ಕೂರಿಸಿದರೆ ಪಾಲಿಕೆ ಕೆರೆಗಳಲ್ಲಿ ವಿಸರ್ಜನೆಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಇದರಿಂದ ವ್ಯಾಪಾರಿಗಳಿಗೆ ನಷ್ಟವಾಗುತ್ತದೆ ನಿಜ. ಆದರೆ ಎಲ್ಲರಿಗೂ ನಷ್ಟ ಆಗಿರುವುದರಿಂದ ವ್ಯಾಪಾರಿಗಳೂ ಈ ಸಮಸ್ಯೆ ಅರಿಯಬೇಕಿದೆ. ಮನೆಗಳಲ್ಲಿ ಕೂರಿಸುವ ಸಣ್ಣ ಗಣಪತಿ ಮೂರ್ತಿ ಮಾರಾಟ ಮಾಡಬಹುದು. ಮೆರೆವಣಿಗೆ ನಡೆಸಿ, ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.