ಬೆಂಗಳೂರು: ಬಿಬಿಎಂಪಿ ನೂತನ ಕಾಯ್ದೆಗೆ ರಾಜ್ಯಪಾಲರು ಸಹಿ ಹಾಕಬಾರದು ಎಂದು ಆಮ್ ಆದ್ಮಿ ಪಕ್ಷ ಈ ಹಿಂದೆ ಆಗ್ರಹಿಸಿತ್ತು. ಆದರೆ ರಾಜ್ಯಪಾಲರು ಈ ಅವೈಜ್ಞಾನಿಕ ಕಾಯ್ದೆಗೆ ಸಹಿ ಹಾಕಿ ಬೆಂಗಳೂರಿನ ಕರಾಳ ಭವಿಷ್ಯಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಎಎಪಿ ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಅಧಿಕಾರ ತನ್ನ ಕೈಯಲ್ಲೇ ಇರಬೇಕು ಎನ್ನುವುದು ಯಡಿಯೂರಪ್ಪ ಸಾರಥ್ಯದ ರಾಜ್ಯ ಬಿಜೆಪಿ ಸರ್ಕಾರದ ಅತಿಯಾಸೆಯಾಗಿದೆ. ಬಿಬಿಎಂಪಿ ನೂತನ ಕಾಯ್ದೆಯಿಂದಾಗಿ ಸರ್ಕಾರದ ಈ ಹುನ್ನಾರ ಬಯಲಾಗಿದೆ. ನಗರದ ಜನರಿಗೆ ಒಳ್ಳೆಯದಾಗುತ್ತದೆ, ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಪದೇ ಪದೆ ಹೇಳುತ್ತಿರುವ ಸರ್ಕಾರಕ್ಕೆ ಬೆಂಗಳೂರು ನಗರ ಒಂದೇ ಏಕೆ ಬೇಕು? ಇದು ಒಳ್ಳೆಯ ಕಾಯ್ದೆಯಾಗಿದ್ದರೆ ಇತರೆ ಮಹಾನಗರ ಪಾಲಿಕೆಗಳಿಗೂ ಇದು ಅನ್ವಯವಾಗುವಂತೆ ಮಾಡಬಹುದಿತ್ತಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಬಿಬಿಎಂಪಿ ನೂತನ ಕಾಯ್ದೆ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ ಎಎಪಿ ನಗರದಾದ್ಯಂತ ಸೆಪ್ಟೆಂಬರ್ ತಿಂಗಳಿನಿಂದ ಜನರ ಕಷ್ಟಗಳಿಗೆ ಸ್ಪಂದಿಸುವ ಒಬ್ಬನೇ ಒಬ್ಬ ಪ್ರತಿನಿಧಿಯೂ ಸಹ ಗೋಚರಿಸುತ್ತಿಲ್ಲ. ಈ ಕಾಯ್ದೆಯಿಂದ ಇನ್ನು ಮುಂದೆ ಪಾಲಿಕೆ ಸದಸ್ಯರಿಗೆ ಯಾವ ಅಧಿಕಾರವೂ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಿಗೆ ಇದ್ದ ಅಧಿಕಾರ ಕಿತ್ತುಕೊಂಡಿರುವ ಸರ್ಕಾರ ಅಧಿಕಾರ ವಿಕೇಂದ್ರೀಕರಣ ತತ್ವವನ್ನೇ ಗಾಳಿಗೆ ತೂರಿ ಸಂಪೂರ್ಣ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಪಾಲಿಕೆ ಸದಸ್ಯರನ್ನು ಕೇವಲ ಆಟದ ಗೊಂಬೆಗಳನ್ನಾಗಿ ಇಟ್ಟುಕೊಳ್ಳುವ ತಿದ್ದುಪಡಿ ಈ ಸರ್ಕಾರದ್ದಾಗಿದೆ ಎಂದು ಕಿಡಿಕಾರಿದರು.
ಪ್ರಸ್ತುತ ಬಿಬಿಎಂಪಿ ಕೈಯಲ್ಲಿ ಇದ್ದ ಅನೇಕ ಅಧಿಕಾರಗಳನ್ನು ಎಲ್ಲಾ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಒಂದೊಂದನ್ನೇ ಕಿತ್ತುಕೊಂಡು ಹಲ್ಲಿಲ್ಲದ ಹಾವಿನಂತೆ ಮಾಡಿದ್ದಾರೆ. ಇದೀಗ ನೂತನ ಕಾಯ್ದೆ ಮೂಲಕ ಬಿಬಿಎಂಪಿಯನ್ನು ಸರ್ವನಾಶ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.