ಬೆಂಗಳೂರು:ಬನ್ನೇರುಘಟ್ಟ ರಸ್ತೆ, ಸರ್ಜಾಪುರ ರಸ್ತೆ ಮತ್ತು ಬೇಗೂರು ಭಾಗದಲ್ಲಿ ರಸ್ತೆ ಅಗಲೀಕರಣಕಾಮಗಾರಿ ಬರೋಬ್ಬರಿ 2 ವರ್ಷದಿಂದ ನಡೆಯುತ್ತಿದೆ. ಆದರೂ ಪೂರ್ಣಗೊಳಿಸದೇ ಮೀನಾಮೇಷ ಎಣಿಸುತ್ತಿದ್ದಾರೆ ಅಂತಾ ಇಂದು ಪಾಲಿಕೆ ಸದಸ್ಯರು ಕೌನ್ಸಿಲ್ ಮೀಟಿಂಗ್ನಲ್ಲಿ ಕಿಡಿಕಾರಿದರು.
ರಸ್ತೆ ಅಗಲೀಕರಣ ಮಾಡಲು ಜನ ಸಿದ್ದರಿದ್ದರು. ಟಿಡಿಆರ್ ಸರ್ಟಿಫಿಕೇಟ್ ಕೊಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ ಶಾಸಕ ಸತೀಶ್ ರೆಡ್ಡಿ, ಬನ್ನೇರುಘಟ್ಟ ರಸ್ತೆಗಾಗಿ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಎರಡು ವರ್ಷ ಕಳೆದರೂ ರಸ್ತೆ ಅಗಲೀಕರಣ ಮಾಡದೇ, ಬೇರೆ ರೀತಿಯಲ್ಲಿ ಲೂಟಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
₹150 ಕೋಟಿ ಇದ್ದ ಯೋಜನೆಗೆ ಮತ್ತೆ ₹50 ಕೋಟಿ ಜಾಸ್ತಿಯಾಗಿದೆ. ಈ ರಸ್ತೆಗೆ ₹ 200 ಕೋಟಿ ಯಾಕೆ ಬೇಕು ಎಂಬುದರ ಬಗ್ಗೆ ತನಿಖೆ ಆಗಬೇಕು ಎಂದು ತಿಳಿಸಿದರು. ಸಿಂಗಲ್ ವಿಂಡೋದಲ್ಲಿ ಜನಕ್ಕೆ ಟಿಡಿಆರ್ ಸರ್ಟಿಫಿಕೇಟ್ ತಲುಪಿಸುವ ಒತ್ತಾಯವನ್ನ ಪಾಲಿಕೆಯ ಆಯುಕ್ತರಿಗೆ ಮತ್ತು ಮೇಯರ್ ಅವರಿಗೆ ಸಭೆ ಮೂಲಕ ಮಾಡಿದ್ದೇವೆ ಅಂತಾ ತಿಳಿಸಿದರು.
ಸಭೆಯ ನಂತರ ಮಾತಾನಾಡಿದ ಮೇಯರ್ ಗಂಗಾಂಭಿಕೆ, ಟಿಡಿಆರ್ ಅಂದರೆ ಜನ ಹೆದರಿಕೊಳ್ಳುವ ಪರಿಸ್ಥಿತಿ ಬರದಂತೆ ನೋಡಿಕೊಳ್ಳುವ ಕೆಲಸ ಮಾಡಬೇಕಿದೆ. ಪ್ರಾಪರ್ಟಿ ಮಾಲೀಕರನ್ನ ಕರೆಸಿ ಆಯಾ ಜನ ಪ್ರತಿನಿಧಿಗಳು ಮಾತಾನಾಡಬೇಕು. ಸಿಂಗಲ್ ವಿಂಡೋ ಮೂಲಕ ಕೆಲಸ ಸುಲಭವಾದರೆ ಒಳ್ಳೆಯದು ಅಂತಾ ತಿಳಿಸಿದರು.