ಬೆಂಗಳೂರು: ಸಿಲಿಕಾನ್ ಸಿಟಿನಲ್ಲಿ ನಿರಂತರ ಮಳೆ ಹಿನ್ನೆಲೆ ಮೇಯರ್ ಗೌತಮ್ ಕುಮಾರ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು.
ಸಭೆಯಲ್ಲಿ ಕಂಟ್ರೋಲ್ ರೂಂ ಸಿಬ್ಬಂದಿಗೆ ಮುಂದಿನ ಒಂದು ವಾರ ರಜೆ ತೆಗೆದುಕೊಳ್ಳದೆ ಕೆಲಸ ಮಾಡಲು ಸೂಚಿಸಲಾಗಿದೆ. 8 ವಲಯಗಳ ಜಂಟಿ ಆಯುಕ್ತರಿಗೆ ವಲಯಗಳ ಜವಾಬ್ದಾರಿ ನೀಡಲಾಗಿದೆ. 24 ಗಂಟೆಗಳ ಕಾಲ ಕಂಟ್ರೋಲ್ ರೂಂ ಕೆಲಸ ಮಾಡಲಿದೆ ಎಂದು ಆಯುಕ್ತರಾದ ಅನಿಲ್ ಕುಮಾರ್ ತಿಳಿಸಿದರು.
ಇನ್ನು ಜಂಟಿ ಆಯುಕ್ತರು, ಮುಖ್ಯ ಅಭಿಯಂತರರಿಗೆ ಕೆರೆಗಳ ಸ್ಥಿತಿಯನ್ನ ಪರಿಶೀಲಿಸಲು ಸೂಚಿಸಿದ್ದು, ಕೆರೆ ಕಟ್ಟೆ ಒಡೆಯುವ ಜಾಗಗಳನ್ನು ಗುರುತಿಸಿ ಸರಿಪಡಿಸಲು ಹೇಳಲಾಗಿದೆ. ಕೆರೆಗಳ ಒಳಹರಿವು, ಹೊರಹರಿವು, ಕೆರೆಗಳ ನೀರು ಸಂಗ್ರಹ ಪ್ರಮಾಣದ ಬಗ್ಗೆಯೂ ಅಧ್ಯಯನ ಮಾಡಿ, ಅಗತ್ಯ ಸಲಕರಣೆ ಅಳವಡಿಸಲು ತಿಳಿಸಲಾಗಿದೆ. ಅಗ್ನಿಶಾಮಕ ದಳ, ಬೆಸ್ಕಾಂ ಸೇರಿದಂತೆ ಎಲ್ಲಾ ಇಲಾಖೆಗಳು ಮಳೆ ಸಂಬಂಧಿತ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಬಗ್ಗೆ ಚರ್ಚೆಯಾಗಿದೆ. ಕಂಟ್ರೋಲ್ ರೂಂನಲ್ಲಿ ಪೊಲೀಸ್ ಇಲಾಖೆ, ರಕ್ಷಣಾ ಸಿಬ್ಬಂದಿ ನಂಬರ್ ಸಹ ನೀಡಲಾಗಿದೆ. ತಗ್ಗು ಪ್ರದೇಶಗಳಲ್ಲಿರೋ ಜನರನ್ನು ಅಗತ್ಯ ಬಿದ್ದಾಗ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ ಬಗ್ಗೆ ಚಿಂತಿಸಲಾಗಿದೆ.