ಬೆಂಗಳೂರು: ಬಿಬಿಎಂಪಿಯಲ್ಲಿ ಕಾಂಗ್ರೆಸ್ ಆಡಳಿತದ ಕೊನೆಯ ಅವಧಿಯಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಎನ್ಜಿಟಿ ನಿಯಮ ಅನುಸರಿಸಿ, ಮಿಶ್ರ ತ್ಯಾಜ್ಯದ ಪ್ರಮಾಣ ತಗ್ಗಿಸಲು ಹಸಿ ಕಸ ಸಂಗ್ರಹಕ್ಕೆ ಪ್ರತ್ಯೇಕ ಟೆಂಡರ್ ಕರೆಯಲಾಗಿತ್ತು. ಆದರೆ ಕಳೆದೊಂದು ವರ್ಷದಿಂದ ಬಿಜೆಪಿ ಆಡಳಿತ ಇರುವುದರಿಂದ ಈ ಟೆಂಡರ್ ಅನ್ನ ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಇದು ಪ್ರಯೋಗಿಕವಾಗಿ ಜಾರಿಗೆ ತಂದು ಇಂದೋರ್ ಮಾದರಿಯ ಕಸ ಸಂಗ್ರಹವೂ ಯಶಸ್ವಿಯಾಗದೆ ಅರ್ಧಕ್ಕೆ ನಿಂತಿದೆ.
ಇದೀಗ ನಗರದ 45 ವಾರ್ಡ್ಗಳಲ್ಲಿ ಹಸಿ ಮತ್ತು ಒಣಕಸ ಪ್ರತ್ಯೇಕ ಟೆಂಡರ್ಗೆ ಕಾರ್ಯಾದೇಶ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಾಂಗ ನಿಂದನೆ ಆಗದಂತೆ ಹಳೆಯ ಟೆಂಡರ್ ಅನ್ನೇ ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಉಳಿದ 105 ವಾರ್ಡ್ಗಳಲ್ಲೂ ಈ ಹಿಂದೆ ಕರೆದಿದ್ದ ಗುತ್ತಿಗೆದಾರರಿಗೆ ಟೆಂಡರ್ ನೀಡಲು ಸೂಚಿಸಲಾಗುವುದು. ಈ ಬಗ್ಗೆ ಆಗಸ್ಟ್ 10ರಂದು ನಡೆಯಲಿರುವ ಕೌನ್ಸಿಲ್ ಸಭೆಯಲ್ಲಿ ವಿಷಯ ಮಂಡನೆ ಮಾಡಿ, ಅನುಮೋದನೆ ಪಡೆಯಲಾಗುವುದು ಎಂದು ದೂರವಾಣಿ ಮೂಲಕ ಮಾಹಿತಿ ನೀಡಿದರು.
ಈ ಬಗ್ಗೆ ಹೊಸ ನಿಯಮ ರೂಪಿಸಿ ಟೆಂಡರ್ ಕರೆದಿದ್ದ ಘನತ್ಯಾಜ್ಯ ವಿಶೇಷ ಆಯುಕ್ತ ರಂದೀಪ್ ಮಾತನಾಡಿ, ಈ ಹಿಂದೆ ಕರೆಯಲಾಗಿದ್ದ ಟೆಂಡರ್ಗೆ ಕಾರ್ಯಾದೇಶ ನೀಡದೆ ಇರುವ ಬಗ್ಗೆ ಹೈಕೋರ್ಟ್ನಿಂದ ಬಿಬಿಎಂಪಿಗೆ ನ್ಯಾಯಾಂಗ ನಿಂದನೆ ನೋಟೀಸ್ ಬಂದಿದೆ. ಸದ್ಯದ ಪರಿಸ್ಥಿತಿ ಏನಿದೆ, ಕೋರ್ಟ್ಗೆ ಏನು ಮಾಹಿತಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ ಎಂದರು.
ಪಾಲಿಕೆಯ ಇತ್ತೀಚಿನೆ ಬೆಳವಣಿಗೆಯಿಂದ ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಹಸಿಕಸದ ಟೆಂಡರ್ಗೆ ಮತ್ತೆ ಚಾಲನೆ ಸಿಗುವ ಸಾಧ್ಯತೆ ಇದೆ.