ಕರ್ನಾಟಕ

karnataka

ETV Bharat / state

ಸಾಲು ಸಾಲು ಹಬ್ಬಗಳ ಹಿನ್ನೆಲೆ.. ಮಾರುಕಟ್ಟೆಗಳಿಗೆ ಹೊಸ ರೂಲ್ಸ್.. ಹೊಸ‌ ನಿಯಮಗಳಲ್ಲೇನೇನಿದೆ?

ಈ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಮೇಲ್ವಿಚಾರಣೆ ಮಾಡಲು ವಲಯ ಜಂಟಿ ಆಯುಕ್ತರು/ಆರೋಗ್ಯಾಧಿಕಾರಿಗಳು ಮತ್ತು ಮುಖ್ಯ ಮಾರ್ಷಲ್‌ಗಳು ಅಗತ್ಯಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತರು ಗೌರವ್ ಗುಪ್ತಾ ಸೂಚಿಸಿದ್ದಾರೆ..

ಮಾರುಕಟ್ಟೆಗಳಿಗೆ ಹೊಸ ರೂಲ್ಸ್
BBMP made new rules for Markets

By

Published : Aug 18, 2021, 7:29 PM IST

Updated : Aug 18, 2021, 8:10 PM IST

ಬೆಂಗಳೂರು :ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ಮಾರುಕಟ್ಟೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಪಾಲಿಕೆ ಹೊರಡಿಸಿದೆ. ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಆದೇಶ ಹೊರಡಿಸಿದ್ದಾರೆ.

2021ನೇ ವರ್ಷದ ಅಕ್ಟೋಬರ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಮೊಹರಂ, ವರಮಹಾಲಕ್ಷ್ಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾ ಪೂಜೆ ಸೇರಿ ಇನ್ನಿತರೆ ಹಬ್ಬಗಳು ಬರುತ್ತಿವೆ. ಈ ವೇಳೆ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ತಡೆಯುವ ಉದ್ದೇಶದಿಂದ ಹಲವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೊರಡಿಸಿರುವ ಆದೇಶದ ಪ್ರತಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಮಾರುಕಟ್ಟೆಗಳಲ್ಲಿ ಕೋವಿಡ್​​ ಸೋಂಕು ತಡೆಗಟ್ಟಲು ವಿವಿಧ ಹಂತಗಳಲ್ಲಿ ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿರುತ್ತದೆ. ಈ ಪೈಕಿ ಮಾರುಕಟ್ಟೆಗಳಲ್ಲಿ ಕೆಳಕಂಡ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.

ಮಾರುಕಟ್ಟೆಗಳಲ್ಲಿ ಅನುಸರಿಸಬೇಕಾದ ಕ್ರಮಗಳು :

  • ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು(Covid Appropriate Behaviour) ಉತ್ತೇಜಿಸಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಕೊರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಪಾಲಿಕೆಯ ಆರೋಗ್ಯ ವೈದ್ಯಾಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದು ವಾಹನ ಬಳಸಿ ಹಬ್ಬದ ಹಿಂದಿನ ದಿನ ಹಾಗೂ ಹಬ್ಬದ ದಿನ ಸೋಂಕಿನ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಚನೆಗಳನ್ನು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ಅರಿವು ಮೂಡಿಸುವುದು.
  • ಮುಖ್ಯ ಮಾರ್ಷಲ್‌ರವರು ಈಗಾಗಲೇ ಪಾಲಿಕೆಯ ಎಂಟು ವಲಯ ಮಟ್ಟದಲ್ಲಿ ಮಾರ್ಷಲ್‌ಗಳಿಗೆ ನಿಯೋಜಿಸಿರುವ ಗಸ್ತು ವಾಹನಗಳನ್ನು ಬಳಸಿಕೊಂಡು ಹಬ್ಬದ ಹಿಂದಿನ ದಿನ ಹಾಗೂ ಹಬ್ಬದ ದಿನ ಕೋವಿಡ್ ಸೋಂಕು ಮುಂಜಾಗ್ರತಾ ಕ್ರಮಗಳ ಬಗ್ಗೆ ಕೇಂದ್ರ ಕಚೇರಿಯಿಂದ ನೀಡಲಾಗಿರುವ ಸಂದೇಶ ಅಥವಾ ಸೂಚನೆಗಳನ್ನು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ಅರಿವು ಮೂಡಿಸುವುದರ ಬಗ್ಗೆ ಕ್ರಮವಹಿಸುವುದು.
  • ಮಾಸ್ಕ್ ಧರಿಸುವ ಕ್ರಮವು ಕೋವಿಡ್ ತಡೆಗಟ್ಟುವ ಅತ್ಯಂತ ಪ್ರಮುಖ ಕ್ರಮವಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದಿರುವವರಿಗೆ 250 ರೂ. ದಂಡವನ್ನು ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ವಿಧಿಸುವುದನ್ನು ಕಡ್ಡಾಯವಾಗಿ ಜಾರಿಗೊಳಿಸುವುದು.
  • ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾರ್ಷಲ್‌ಗಳು ಹಾಗೂ ಹಿರಿಯ ಆರೋಗ್ಯ ಪರಿವೀಕ್ಷಕರುಗಳು/ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಅಗತ್ಯ ಕ್ರಮವಹಿಸುವುದು ಹಾಗೂ ಸಾಮಾಜಿಕ ಅಂತರದ ನಿಯಮ ಉಲ್ಲಂಘಿಸುವ ವರ್ತಕರಿಗೆ ಮತ್ತು ಸಾರ್ವಜನಿಕರಿಗೆ 250 ರೂ. ದಂಡವನ್ನು ವಿಧಿಸುವುದು.
  • ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಮಾಲ್‌ಗಳ ಮಾಲೀಕರು ತಾವು ಸೇರಿದಂತೆ ತಮ್ಮ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ಕನಿಷ್ಠ ಮೊದಲನೇ ಡೋಸ್ ಲಸಿಕೆ ಪಡೆದಿರುವುದರ ಬಗ್ಗೆ ಖಾತರಿಪಡಿಸಿಕೊಳ್ಳುವುದು.
  • ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಮಾಲ್‌ಗಳ ಮಾಲೀಕರುಗಳು ತಮ್ಮ ಸಿಬ್ಬಂದಿ ಮತ್ತು ಸಾರ್ವಜನಿಕರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಗಮನಿಸುವುದು.
  • ಮಾರ್ಷಲ್‌ಗಳು, ಹಿರಿಯ ಆರೋಗ್ಯ ಪರಿವೀಕ್ಷಕರು ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಅಂಗಡಿಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು ಮತ್ತು ಮಾರುಕಟ್ಟೆ ಸ್ಥಳಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿರುವ ಬಗ್ಗೆ ಅನಿರೀಕ್ಷಿತ ಭೇಟಿ ನೀಡಿ ಖಾತರಿಪಡಿಸಿಕೊಳ್ಳುವುದು. ನಿಗದಿಪಡಿಸಿರುವ ಕರ್ಫ್ಯೂ ಸಮಯದಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸುವುದು ಮತ್ತು ಯಾವುದೇ ವ್ಯಕ್ತಿ/ಸಂಸ್ಥೆ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ದಂಡದ ಜೊತೆಗೆ ವಿಪತ್ತು ನಿರ್ವಹಣಾ ಕಾಯ್ದೆ 2005ರ ನಿಯಮಾವಳಿಯನ್ವಯ ಕ್ರಮಕೈಗೊಳ್ಳುವುದು.

ಈ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಮೇಲ್ವಿಚಾರಣೆ ಮಾಡಲು ವಲಯ ಜಂಟಿ ಆಯುಕ್ತರು/ಆರೋಗ್ಯಾಧಿಕಾರಿಗಳು ಮತ್ತು ಮುಖ್ಯ ಮಾರ್ಷಲ್‌ಗಳು ಅಗತ್ಯಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತರು ಗೌರವ್ ಗುಪ್ತಾ ಸೂಚಿಸಿದ್ದಾರೆ.

ಓದಿ: corona precautions.. ಮಾರ್ಷಲ್​ಗಳ 54 ಟೀಂ ನೇಮಕ ಮಾಡಲಾಗಿದೆ.. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

Last Updated : Aug 18, 2021, 8:10 PM IST

ABOUT THE AUTHOR

...view details