ಬೆಂಗಳೂರು:ದೇವರಚಿಕ್ಕನಹಳ್ಳಿ ಅಪಾರ್ಟ್ಮೆಂಟ್ನಲ್ಲಿ ನಡೆದ ಬೆಂಕಿ ಅನಾಹುತ ಘಟನೆಯಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಕಟ್ಟಡ ನಿರ್ಮಾಣದ ನಿಯಮಗಳಲ್ಲಿ ಕೆಲವು ಮಾರ್ಪಾಡು ಮಾಡಿ ಆದೇಶ ಹೊರಡಿಸಿದೆ.
ಕಟ್ಟಡಗಳ ನಿರ್ಮಾಣದ ಬಳಿಕ ಬಿಬಿಎಂಪಿ ಪರಿಶೀಲಿಸಿ ಸ್ವಾಧೀನಾನುಭವ ಪತ್ರ ಕೊಡಲಿದೆ. ಆ ನಂತರ ಕಟ್ಟಡದಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಮಾಡುವುದಾದರೆ ಮತ್ತೆ ಪಾಲಿಕೆಯಿಂದ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ವಸತಿ ಸಮುಚ್ಚಯಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಬಾಲ್ಕನಿಯಲ್ಲಿ ಬದಲಾವಣೆಗಳು ಹಾಗೂ ಇನ್ನಿತರೆ ಅಸುರಕ್ಷಿತ ಕಟ್ಟಡ ಮಾರ್ಪಾಡುಗಳನ್ನು ತಡೆಗಟ್ಟಲು ಈ ಆದೇಶ ಹೊರಡಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಕಟ್ಟಡಗಳಿಗೆ ಕಟ್ಟಡ ಉಪವಿಧಿ - 2003, ಪರಿಷ್ಕೃತ ವಲಯ ನಿಯಮಾವಳಿಗಳು -2015 ಮತ್ತು ನ್ಯಾಷನಲ್ ಬಿಲ್ಡಿಂಗ್ ಕೋಡ್-2016ರ (National Building Code of India) ಅನ್ವಯ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಪಡೆದ ನಂತರ ಕಟ್ಟಡಗಳ ಬಾಲ್ಕನಿಗಳನ್ನು ಸಂಪೂರ್ಣವಾಗಿ ಮುಚ್ಚುವುದು ಹಾಗೂ ಇನ್ನಿತರೆ ಅಸುರಕ್ಷತಾ ಕಟ್ಟಡ ಮಾರ್ಪಾಡುಗಳನ್ನು ನಿರ್ವಹಿಸಲು ನಿಯಮಾನುಸಾರ ಅವಕಾಶ ಇಲ್ಲ. ಆದಾಗ್ಯೂ ಕಟ್ಟಡ ಮಾಲೀಕರು ನಿಯಮಬಾಹಿರವಾಗಿ ಅಸುರಕ್ಷತೆಗೆ ಕಾರಣವಾಗುವಂತೆ ಕಟ್ಟಡ ಮಾರ್ಪಾಡು ಮಾಡುತ್ತಿದ್ದಾರೆ.