ಬೆಂಗಳೂರು:ಬಿಬಿಎಂಪಿ ನೂತನ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ಅವರ ನಿರ್ದೇಶನದಂತೆ ನಗರದ ಎಂಟು ವಯಲಗಳಲ್ಲಿರುವ ವಾರ್ಡ್ಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.
ಯಲಹಂಕದ ಕೊಡಿಗೆಹಳ್ಳಿ, ವಿದ್ಯಾರಣ್ಯಪುರ, ನಂದಿನಿ ಲೇಔಟ್, ರಾಮಮಂದಿರ, ಆಡುಗೋಡಿ, ಕೋರಮಂಗಲ, ಈಜೀಪುರ, ಬಾಗಲಗುಂಟೆ, ಪುಟ್ಟೇನಹಳ್ಳಿ, ಉತ್ತರಹಳ್ಳಿ, ಬೆಳ್ಳಂದೂರು ಸೇರಿದಂತೆ ಒಟ್ಟು 29 ವಾರ್ಡ್ಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕೇವಲ ಕಸ ನಿರ್ವಹಣೆ ವಿಭಾಗ ಮಾತ್ರವಲ್ಲದೆ ಇಂಜಿನಿಯರ್ ವಿಭಾಗ, ರಾಜಕಾಲುವೆ ನಿರ್ವಹಣೆ ಸೇರಿದಂತೆ ನಗರಾದ್ಯಂತ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ವಿಭಾಗದ ಅಧಿಕಾರಿ ನೌಕರರೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಯುಕ್ತರು ಸೂಚಿಸಿದ್ದರು. ವಾರ್ಡ್ನ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಿಂದ ಈ ಕ್ರಮಕ್ಕೆ ಪಾಲಿಕೆ ಮುಂದಾಗಿದ್ದು, ಪಾಲಿಕೆ ಜೊತೆ ಸ್ಥಳೀಯರು, ಸಂಘ ಸಂಸ್ಥೆಯವರು ಕೈ ಜೋಡಿಸಿದ್ದರು.
ರಸ್ತೆಗಳ ಸ್ವಚ್ಛತೆ, ಚರಂಡಿಗಳಲ್ಲಿ ಹೂಳೆತ್ತುವುದು, ಪಾದಚಾರಿ ಮಾರ್ಗದಲ್ಲಿ ಬಿದ್ದಿರುವ ಅನುಪಯುಕ್ತ ಕೇಬಲ್ಸ್, ಪೈಪ್ಗಳ ತೆರವುಗೊಳಿಸಲಾಯಿತು. ಅಲ್ಲದೆ, ಕುಸಿದು ಬಿದ್ದಿರುವ ಚಪ್ಪಡಿಗಳ ದುರಸ್ತಿ ಕಾರ್ಯ ಹಾಗೂ ಪಾದಚಾರಿ ಮಾರ್ಗದಲ್ಲಿ ಶಾಶ್ವತವಾಗಿ ಅಳವಡಿಸಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸುವುದು, ಕೆರೆ ಸ್ವಚ್ಛತೆ, ರಸ್ತೆಗುಂಡಿ ದುರಸ್ತಿ, ಬ್ಲಾಕ್ ಸ್ಪಾಟ್ ತೆರವು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.
ಸ್ವಚ್ಛತಾ ಕಾರ್ಯ ನಡೆಯುವ ವೇಳೆ ಪಾಲಿಕೆ ಆಯುಕ್ತರು ಹಾಗೂ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಮಲಿಂಗಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ರು. ಇದೇ ವೇಳೆ ಪಾಲಿಕೆ ಆಯುಕ್ತರು ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ಬಳಸದಂತೆ ಸೂಚಿಸಿದರು. ಬಳಿಕ ಕೋರಮಂಗಲ ವಾರ್ಡ್ನಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸಿದರು.