ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಬೆಂಕಿ ಅನಾಹುತ ಸಂಬಂಧ ದೂರದಾರರಿಗೆ ಅಂದರೆ, ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರಿಗೆ ಹಲಸೂರು ಗೇಟ್ ಠಾಣಾ ಪೊಲೀಸರು ನೊಟೀಸ್ ನೀಡಿದ್ದಾರೆ. ಈ ಕುರಿತು ಮುಖ್ಯ ಎಂಜಿನಿಯರ್ ತೀವ್ರ ಅಸಮಾಧಾನ ಹೊರಹಾಕಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಹೇಳಿದ್ದಾರೆ.
ನಗರದಲ್ಲಿ ಇಂದು (ಸೋಮವಾರ) ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಘಟನೆ ಸಂಬಂಧ ನಾನೇ ಠಾಣೆಗೆ ದೂರು ನೀಡಿದ್ದೇನೆ. ಹೀಗಿರುವಾಗ ನನಗೆ ನೊಟೀಸ್ ನೀಡಿರುವುದು ಅಚ್ಚರಿ ತಂದಿದೆ. ಪೊಲೀಸರ ವರ್ತನೆ ಬಗ್ಗೆ ಪಾಲಿಕೆ ಮೇಲಾಧಿಕಾರಿಗಳ ಜೊತೆಗೆ ಮಾತನಾಡಿ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇನೆ'' ಎಂದರು.
"ನೊಟೀಸ್ ನನಗೆ ತಲುಪಿಲ್ಲ. ನನ್ನ ಕಚೇರಿಗೂ ಬಂದಿಲ್ಲ. ಮಾಧ್ಯಮಗಳಲ್ಲಿ ವರದಿಯಾಗಿರುವ ಕುರಿತು ಮಾಹಿತಿ ಇದೆ. ನೊಟೀಸ್ ವಿಚಾರವನ್ನು ಸಾರ್ವಜನಿಕಗೊಳಿಸಲಾಗಿದೆ. ಇದು ಹೇಗೆ ಸಾಧ್ಯ ಎಂದೆಲ್ಲ ಕಾನೂನು ತಜ್ಞರ ಬಳಿ ಚರ್ಚಿಸಲಾಗುವುದು'' ಎಂದು ತಿಳಿಸಿದರು.