ಬೆಂಗಳೂರು: ಕೋವಿಡ್ -19 ನಿಯಮ ಪಾಲನೆಯಲ್ಲಿ ಬಿಬಿಎಂಪಿಯ ಬೇಜವಾಬ್ದಾರಿತನ ಮತ್ತೊಮ್ಮೆ ಸಾಬೀತಾಗಿದೆ.
ಸರ್ಕಾರದ ಕೋವಿಡ್ ನಿಯಮದಂತೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡವರ ಮನೆ ಹಾಗೂ ರಸ್ತೆಯನ್ನು ಸೀಲ್ಡೌನ್ ಮಾಡಿ, ಅಲ್ಲಿ ಯಾರು ಒಡಾಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಆದರೆ ಸಂಸದೆ ಸುಮಲತಾ ಅಂಬರೀಶ್ ಕ್ವಾರಂಟೈನ್ನಲ್ಲಿರುವ ಜೆ.ಪಿ. ನಗರ ಮನೆಯ ರಸ್ತೆಯನ್ನು, ಸೀಲ್ಡೌನ್ ಮಾಡದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜೆ.ಪಿ. ನಗರದ ಅಂಬಿ ನಿವಾಸದ ಗೇಟ್ ಬಳಿ ಬ್ಯಾರಿಕೇಡ್ ಹಾಕಿ ಕೊರೊನಾ ಪಾಸಿಟಿವ್ ಎಂದು ಬೋರ್ಡ್ ಹಾಕಿದ್ದು ಬಿಟ್ಟರೆ, ಆ ರಸ್ತೆಯಲ್ಲಿ ಯಾವುದೇ ಮುಂಜಾಗ್ರತೆ ವಹಿಸಿಲ್ಲ. ಅಂಬಿ ಮನೆಯ ರಸ್ತೆಯಲ್ಲಿ ಸದಾ ವಾಹನಗಳು ಓಡಾಡುತ್ತವೆ. ಇದು ಗೊತ್ತಿದ್ದರೂ ಸಹ ಬಿಬಿಎಂಪಿ ಅಧಿಕಾರಿಗಳು ಕಂಟೇನ್ಮೆಂಟ್ ಝೋನ್ನಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿಲ್ಲ ಎನ್ನಲಾಗ್ತಿದೆ.
ಸುಮಲತಾ ಅಂಬರೀಶ್ ಮನೆಯ ರಸ್ತೆ ಓಪನ್ ಸೋಮವಾರ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಇದನ್ನು ಸ್ವತಃ ಅವರೇ ದೃಢಪಡಿಸಿದ್ರು. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕೆಲವರಿಗೆ ಈಗಾಗಲೇ ಪಾಸಿಟಿವ್ ವರದಿಯಾಗಿದೆ.
ಬಿಬಿಎಂಪಿಯ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾನ್ಯರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೆ ಒಂದು ನ್ಯಾಯನಾ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಸಾಮಾನ್ಯ ಜನ ವಾಸಿಸುವ ಏರಿಯಾದಲ್ಲಿ ಕೊರೊನಾ ಪತ್ತೆಯಾದ್ರೆ, ಆ ರಸ್ತೆಯನ್ನೇ ಮುಚ್ಚಿ ಜನರಿಗೆ ತೊಂದರೆ ಕೊಡ್ತಾರೆ ಎಂದು ಜನರು ಕಿಡಿಕಾರಿದ್ದಾರೆ.