ಬೆಂಗಳೂರು:ರಾಜಧಾನಿಯ ನಾಗರಿಕರಿಗೆ ಹಲವು ವಸ್ತುಗಳ ಬೆಲೆ ಏರಿಕೆಯ ಬಿಸಿ ನಡುವೆ, ಮತ್ತೊಂದೆಡೆ ಹೊರೆ ಹೊರುವ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಶೀಘ್ರದಲ್ಲೇ ಪಾರ್ಕಿಂಗ್ ಪಾಲಿಸಿ 2.0 ಜಾರಿಗೆ ಸರ್ಕಾರ, ಪಾಲಿಕೆ ಮುಂದಾಗಿದೆ. ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಾರ್ಕಿಂಗ್ ಪಾಲಿಸಿ 2.0ಕ್ಕೆ ಸರ್ಕಾರ ಅನುಮೋದನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ರಸ್ತೆಗಳಲ್ಲಿ ನಿಲ್ಲಿಸುವ ಪ್ರತಿಯೊಂದು ವಾಹನಗಳಿಗೆ ಹಣಪಾವತಿ ಮಾಡಬೇಕಾಗಿದೆ. ಡಲ್ಫ್ ಸಂಸ್ಥೆಯು ಕಳೆದ 2 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಬಳಕೆಯ ಪ್ರಮಾಣ ಹೆಚ್ಚಳ ಹಾಗೂ ಖಾಸಗಿ ವಾಹನಗಳ ನಿಯಂತ್ರಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರಕ್ಕೆ ತನ್ನ ಸಮಗ್ರ ಅಧ್ಯಯನ ವರದಿಯನ್ನು ಸಲ್ಲಿಸಿತ್ತು.
ಸ್ಮಾರ್ಟ್ ಪಾರ್ಕಿಂಗ್ ಪಾಲಿಸಿಗೆ ಸರ್ಕಾರದಿಂದ ಅನುಮೋದನೆ: ಈ ಕುರಿತು ಪ್ರತಿಕ್ರಿಯಿಸಿರುವ ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು, ಬೆಂಗಳೂರು ಸ್ಮಾರ್ಟ್ ಪಾರ್ಕಿಂಗ್ ಪಾಲಿಸಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಮುಂದಿನ ವಾರದಿಂದ ಎಲ್ಲ ನಿಯಮಗಳನ್ನು ಏರಿಯಾವಾರು ಜಾರಿಗೆ ತರಲಾಗುತ್ತದೆ. ಎಲ್ಲಾ ವಾಹನಗಳ ನಿಲುಗಡೆಗೂ ನಿಗದಿತ ಶುಲ್ಕವನ್ನು ವಿಧಿಸಲಾಗುತ್ತದೆ ಎಂದಿದ್ದಾರೆ.