ಬೆಂಗಳೂರು :ನಗರದ ಜನರ ಆರೋಗ್ಯ ಕಾಪಾಡುವ ಬಹುದೊಡ್ಡ ಜವಾಬ್ದಾರಿಯನ್ನು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ರಂದೀಪ್ ಡಿ ವಹಿಸಿಕೊಂಡಿದ್ದಾರೆ. ನಗರದಲ್ಲಿ ಅನ್‌ಲಾಕ್ ಬಳಿಕ ಕೋವಿಡ್ ಸೋಂಕು ಹೆಚ್ಚಾಗದಂತೆ, ಮೂರನೇ ಸೋಂಕು ಹರಡುವಿಕೆ ತಡೆಗಟ್ಟಲು ಹಲವಾರು ಮಾಸ್ಟರ್ ಪ್ಲಾನ್ಗಳನ್ನು ಮಾಡಿದ್ದು, ಈಟಿವಿ ಭಾರತ್ ಜೊತೆ ಡಿ.ರಂದೀಪ್ ಇವುಗಳ ಬಗ್ಗೆ ಹಂಚಿಕೊಂಡರು.
ಎಲ್ಲಾ ವಲಯಗಳಲ್ಲಿ ಶೇ.1ಕ್ಕಿಂತ ಕೋವಿಡ್ ಕಡಿಮೆ ಬಂದರೆ ಅನ್‌ಲಾಕ್ - ಕಂಟೇನ್‌ಮೆಂಟ್ ಕಟ್ಟುನಿಟ್ಟು :
ಅನ್‌ಲಾಕ್ ನಡೆಯುತ್ತಿರುವುದರಿಂದ ಜನರ ಓಡಾಟ ಹೆಚ್ಚಾಗಿರುವುದರಿಂದ ಟೆಸ್ಟಿಂಗ್ ಕಡಿಮೆ ಮಾಡಲಾಗುವುದಿಲ್ಲ. ಪಾಸಿಟಿವಿಟಿ ರೇಟ್ ಶೇ.1ಕ್ಕಿಂತ ಕಡಿಮೆ ಆಗುವವರೆಗೂ ಎಲ್ಲಾ ಬಗೆಯ ಅನ್‌ಲಾಕ್ ಸಾಧ್ಯವಿಲ್ಲ. ಕೆಲ ವಲಯಗಳಲ್ಲಿ ಇನ್ನೂ ಶೇ.3ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವಿಟಿ ಪ್ರಮಾಣ ಇದೆ ಎಂದರು. ಕಂಟೇನ್‌ಮೆಂಟ್ ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರುಗಳಿವೆ. ಕಟ್ಟುನಿಟ್ಟಾಗಿ ಇನ್ಮುಂದೆ ಕಂಟೇನ್‌ಮೆಂಟ್ ಮಾಡಲಾಗುವುದು ಎಂದರು. ಜೊತೆಗೆ ಕೋವಿಡ್ ಬಂದ ಅಕ್ಕಪಕ್ಕದ ಮನೆಯವರಿಗೂ ತಿಳಿಸಲಾಗುವುದು ಎಂದರು. ಮಾರ್ಷಲ್ಸ್ ತಂಡಗಳನ್ನು ಕೂಡ 20 ರಿಂದ 30 ತಂಡಕ್ಕೆ ಹೆಚ್ಚಳ ಮಾಡಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಮಾಡಲಾಗುತ್ತದೆ ಎಂದರು.
ವಿಶೇಷ ಆಯುಕ್ತರಾದ ರಂದೀಪ್ ಜೊತೆ ಚಿಟ್ಚಾಟ್ ವ್ಯಾಕ್ಸಿನ್ ವಿತರಣೆಗೆ ಚುರುಕು :ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಸದ್ಯದಲ್ಲೇ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡಲು ಸಿದ್ಧ ಮಾಡಲಾಗುತ್ತದೆ. 45 ವರ್ಷ ಮೇಲ್ಪಟ್ಟವರಿಗೆ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಪ್ರತಿ ಎಂಟು ವಲಯದಲ್ಲಿ ಮನೆ ಮನೆಗಳ ಸರ್ವೆ ನಡೆಯುತ್ತಿದೆ. ನಾಳೆ ಈ ಸರ್ವೆ ವರದಿ ಕೈಸೇರಲಿದೆ ಎಂದರು.
ಹೋಂ ಐಸೋಲೇಷನ್ ಒಳಗಾದವರಲ್ಲಿ ಶೇ.5ರಷ್ಟು ಸಾವು-ಡೆತ್ ಆಡಿಟ್ :
ನಗರದಲ್ಲಿ ಸಾಂಕೇತಿಕವಾಗಿ ಕೋವಿಡ್ ಮರಣ ವರದಿಯನ್ನು (ಡೆತ್ ಆಡಿಟ್) ಸಿದ್ಧಪಡಿಸಿದ್ದು, ಈ ಮರಣಗಳನ್ನು ತಡೆಯಲು ಕೆಲವು ಸಲಹೆಗಳನ್ನು ಕೂಡ ಕೊಡಲಾಗಿದೆ. ಪಾಸಿಟಿವ್ ಬಂದವರು ಹೋಂ ಐಸೋಲೇಷನ್‌ನಲ್ಲಿ ಇರಲು ಇಚ್ಛಿಸುತ್ತಿದ್ದರು. ಆದರೆ, 8-9ನೇ ದಿನ ಆಸ್ಪತ್ರೆಗೆ ದಾಖಲಾಗಿ ಕೆಲವರು ಮೃತಪಟ್ಟಿದ್ದರು. ಹಾಗಾಗಿ, ಇದನ್ನು ತಡೆಯಲು ಹೋಂ ಐಸೋಲೇಷನ್ನಲ್ಲಿರಲು ಫೋನ್ ಮೂಲಕ ನಿರ್ಧಾರ ಮಾಡುವ ಬದಲು, ಬಿಬಿಎಂಪಿಯಿಂದ ಸಂಚಾರಿ ವೈದ್ಯರ ತಂಡ ಹೋ ವಿಸಿಟ್ ಅನ್ನು ಕಡ್ಡಾಯವಾಗಿ ಮಾಡಬೇಕು. ಅಥವಾ ಟ್ರಯಾಜ್ ಸೆಂಟರ್ಗಳಿಗೆ ಭೇಟಿ ನೀಡಿ, ಫಿಜಿಕಲ್ ಟ್ರಯಾಜ್ ಆದ ನಂತರವೇ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಇದರಿಂದ ಹೋಂ ಐಸೋಲೇಷನ್ ಸಾವನ್ನು ತಡೆಯಬಹುದು. ಈ ಬಗ್ಗೆ ಬಿಬಿಎಂಪಿ ಕ್ರಮಕೈಗೊಳ್ಳುತ್ತಿದೆ ಎಂದು ರಂದೀಪ್ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯ ಲ್ಯಾಬ್‌ನಲ್ಲೂ ಜಿನೋಮ್ ಸ್ವೀಕ್ವೆನ್ಸಿಂಗ್ ಟೆಸ್ಟ್ ಆರಂಭ :
ಪಾಲಿಕೆ ವ್ಯಾಪ್ತಿಯ ಒಂದು ಲ್ಯಾಬ್ನಲ್ಲಿ ಪಾಲಿಕೆಯಿಂದ ಜೀನೋಮ್ ಸ್ವೀಕ್ವೆನ್ಸಿಂಗ್ ಆರಂಭ ಮಾಡಲಾಗುವುದು. ನಗರದಲ್ಲಿ ಪಾಸಿಟಿವ್ ಬರುವ ಸುಮಾರು ಶೇ.5ರಷ್ಟು ಸ್ಯಾಂಪಲ್ಗಳನ್ನು ಜೀನೋಮ್ ಸ್ವೀಕ್ವೆನ್ಸಿಂಗ್ ಪತ್ತೆ ಹಚ್ಚಲು ಬಳಸಲಾಗುವುದು. ಇದರಿಂದ ನಗರದಲ್ಲಿ ಯಾವ ರೀತಿಯ ಕೋವಿಡ್ ತಳಿ ಹರಡುತ್ತಿದೆ, ಯಾವ ರೀತಿ ಕೊರೊನಾ ರೂಪಾಂತರಿಯಾಗುತ್ತಿದೆ. ನಗರದ ಯಾವ ಭಾಗದಲ್ಲಿ ಕೊರೊನಾದ ಯಾವ ತಳಿ ಹೆಚ್ಚು ಹರಡುತ್ತಿದೆ ಎಂಬ ವಿವರ ಸಿಗಲಿದೆ ಎಂದರು.
ಮೂರನೇ ಅಲೆಗೆ ಸಿದ್ಧತೆ ಹೇಗೆ?
ಎರಡನೇ ಅಲೆಗೆ ಸಿದ್ದಗೊಳಿಸಿದ್ದ ಸಿಸಿಸಿ ಸೆಂಟರ್, ಟ್ರಯಾಜ್ ಸೆಂಟರ್‌ಗಳನ್ನು ಕೊರೊನಾ ಪ್ರಕರಣ ಕಡಿಮೆಯಾದರೂ ಬಂದ್ ಮಾಡುವುದಿಲ್ಲ. ಖಾಸಗಿ ಆಸ್ಪತ್ರೆಗಳು ಸಹ ತಮ್ಮ ಕಸ್ಟಡಿಯಲ್ಲೇ ಇರಲಿವೆ. ವಾರ್ ರೂಂ ಸಭೆಗಳೂ ನಿರಂತರವಾಗಿ ನಡೆಯುತ್ತಿದೆ, ಕೋವಿಡ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿರುತ್ತೆ ಎಂದು ರಂದೀಪ್ ತಿಳಿಸಿದರು.