ಬೆಂಗಳೂರು:5 ವರ್ಷದ ಹಿಂದೆ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಉದ್ಘಾಟನೆಯಾಗಿದ್ದ ಮೇಲ್ಸೇತುವೆಯಲ್ಲಿ ಉಬ್ಬುವಿಕೆ ಕಾಣಿಸಿಕೊಂಡಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ ಎದ್ದಿದೆ. ಆರೋಪ ಕೇಳಿಬರುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಐಐಎಸ್‌ಸಿಯಿಂದ ಸಮಗ್ರ ವರದಿಗೆ ಪಡೆಯಲು ಮುಂದಾಗಿದ್ದಾರೆ. ಈ ಹಿಂದೆ ಇದೇ ವಿಷಯವಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ವರದಿ ಪಡೆದಿದ್ದರೂ, ಮತ್ತೊಮ್ಮೆ ಐಐಎಸ್‌ಸಿ (ಭಾರತೀಯ ವಿಜ್ಞಾನ ಸಂಸ್ಥೆ)ಯಿಂದ ವರದಿ ಪಡೆಯಲು ನಿರ್ಧರಿಸಲಾಗಿದೆ.
ಸಾವಿರಾರು ಜನರು ದಿನನಿತ್ಯ ಓಡಾಡುವ ನಗರದ ವೆಸ್‌ಟ್ ಆಫ್ ಕಾರ್ಡ್ ರಸ್ತೆಯ ಮಂಜುನಾಥ ನಗರ ಮೇಲ್ಸೇತುವೆಯ ಕಾಮಗಾರಿ ಮುಗಿದು ಸಾರ್ವಜನಿಕರಿಗೆ ಮುಕ್ತವಾಗಿ ಕೇವಲ 5 ವರ್ಷಗಳಷ್ಟೇ ಆಗಿದೆ. ಈಗಾಗಲೇ ಮೇಲ್ಸೇತುವೆಯ ಆರ್.ಇ ಪ್ಯಾನಲ್‌ಗಳಲ್ಲಿ ಉಬ್ಬುಗಳು ಕಂಡುಬಂದಿದ್ದು, ತಾಂತ್ರಿಕ ವರದಿ ಅನ್ವಯ ರಸ್ತೆ ಮಧ್ಯೆ ಉಬ್ಬು ತಡೆಯುವ ಸಲುವಾಗಿ 52 ಆರ್.ಇ ಪ್ಯಾನೆಲ್‌ಗಳಿಂದ ನೈಲಿಂಗ್ ಅಳವಡಿಸಲಾಗಿದೆ. ಇದರಿಂದಾಗಿ ಮೇಲ್ಸೇತುವೆಯಲ್ಲಿ ಬಿರುಕುಗಳು ಕಂಡುಬಂದಿವೆ.
ವರದಿ ಕೇಳಿದ ಬಿಬಿಎಂಪಿ:ಈ ಹಿಂದೆ ಮೇಲ್ಸೇತುವೆ ಕುರಿತು ಬೆಂಗಳೂರು ವಿಶ್ವವಿದ್ಯಾನಿಲಯದ ತಜ್ಞರು ವರದಿ ನೀಡಿದ್ದರು. ಅದಾದ ಬಳಿಕವೂ ಕೆಲವು ಆರೋಪಗಳು ಬಂದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮೇಲ್ಸೇತುವೆ ಸುರಕ್ಷತಾ ಆಡಿಟ್ ಮಾಡಿ ವರದಿ ನೀಡುವಂತೆ ಐಐಎಸ್‌ಸಿಯವರಿಂದ ಮತ್ತೊಂದು ಅಭಿಪ್ರಾಯವನ್ನು ಪಡೆಯಲು ಪತ್ರ ಬರೆದಿದೆ. ಅವರು ನೀಡುವ ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ತಿಳಿಸಿದೆ.