ಕರ್ನಾಟಕ

karnataka

ETV Bharat / state

ಬೆಂಗಳೂರಿನ ಉದ್ಯಾನ, ಕೆರೆಗಳ ಸಂರಕ್ಷಣೆಗೆ ಮೊಬೈಲ್ ಆ್ಯಪ್‌: ಬಿಬಿಎಂಪಿ - ಬಿಬಿಎಂಪಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳು, ಕೆರೆಗಳ ಸಂರಕ್ಷಣೆಗೆ ಮೂರು ಮೊಬೈಲ್ ಆ್ಯಪ್‌ ಸಿದ್ಧಪಡಿಸಲಾಗಿದೆ.

ಬಿಬಿಎಂಪಿ
ಬಿಬಿಎಂಪಿ

By ETV Bharat Karnataka Team

Published : Jan 14, 2024, 11:02 PM IST

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳು, ಕೆರೆಗಳ ಸಂರಕ್ಷಣೆಯ ಜೊತೆಗೆ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಹಸಿರು ರಕ್ಷಕ, ಉದ್ಯಾನ ಮಿತ್ರ ಹಾಗೂ ಕೆರೆ ಮಿತ್ರ ಎಂಬ ಮೂರು ಮೊಬೈಲ್ ಆ್ಯಪ್‌ ಹಾಗೂ ವೆಬ್ ಲಿಂಕ್ ಸಿದ್ಧಪಡಿಸಲಾಗಿದೆ.

ನಗರವನ್ನು ಹಸಿರೀಕರಣಗೊಳಿಸುವುದು ಅವಶ್ಯಕತೆಯಿದ್ದು, ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಉದ್ಯಾನಗಳು, ಕೆರೆಗಳು ಹಾಗೂ ಹಸಿರೀಕರಣದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಸಲುವಾಗಿ ಪಾಲಿಕೆ ವತಿಯಿಂದ ಮೊಬೈಲ್ ಆ್ಯಪ್‌ಗಳನ್ನು ತಯಾರಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಹಸಿರು ರಕ್ಷಕ: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜೂ. 5ರ ವಿಶ್ವಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜು ಮಕ್ಕಳನ್ನು ಒಳಗೊಂಡು ಗಿಡಗಳನ್ನು ನೆಟ್ಟು ಪೋಷಿಸುವ ಬಗ್ಗೆ ನೀಡಿದ ಸಲಹೆಯ ಮೇರೆಗೆ ಹಸಿರು ರಕ್ಷಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರನ್ನು ಹಸಿರೀಕರಣ ಮಾಡಲು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಹಾಗೂ ಮರಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿಗೊಳಿಸುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯ 224 ಶಾಲಾ ಕಾಲೇಜುಗಳ ಸುಮಾರು 52,015 ವಿದ್ಯಾರ್ಥಿಗಳು ನೆಡಲಾದ ಗಿಡಗಳಿಗೆ ಟ್ಯಾಗ್ ಮಾಡಿಸಿ, ಹಸಿರು ರಕ್ಷಕ ಕಾರ್ಯಕ್ರಮ ನಡೆಯಲಿದೆ.

ಮೊಬೈಲ್ ಆ್ಯಪ್‌ನಲ್ಲಿ ಟ್ಯಾಗ್ ಮಾಡಲಾದ ವಿದ್ಯಾರ್ಥಿಗಳು ಟ್ಯಾಗ್ ಐಡಿಯೊಂದಿಗೆ ಲಾಗಿನ್ ಆಗಿ, ತಮಗೆ ಟ್ಯಾಗ್ ಮಾಡಲಾದ ಗಿಡದ ವಿವರ, ಬೆಳವಣಿಗೆ ಬಗ್ಗೆ ಹಾಗೂ ಪೋಷಣೆಯ ಬಗ್ಗೆ ಮಾಹಿತಿ ಪಡೆದುಕೊಂಡು, ಗಿಡದ ಪೋಷಣೆಯ ಬಗ್ಗೆ ದೂರುಗಳು ಹಾಗೂ ಸಲಹೆಗಳನ್ನು ನೀಡಿದ್ದಲ್ಲಿ ದೂರುಗಳನ್ನು ಸಂಯೋಜಕರು, ಗುತ್ತಿಗೆದಾರರು ಬಗೆಹರಿಸಿ ಮಾಹಿತಿಯನ್ನು ಆಪ್‌ನಲ್ಲಿ ನಮೂದಿಸಲಾಗಿದೆ. 3 ವರ್ಷಗಳ ಕಾಲ ಯಶಸ್ವಿಯಾಗಿ ಗಿಡಗಳನ್ನು ಉಸ್ತುವಾರಿ ಮಾಡಿದ ವಿದ್ಯಾರ್ಥಿಗಳಿಗೆ ‘ಹಸಿರುರಕ್ಷಕ’ ಎಂಬ ಪ್ರಮಾಣ ಪತ್ರವನ್ನು ನೀಡಲಾಗಿದೆ.

ಮೊಬೈಲ್ ಆಪ್‌ನಲ್ಲಿ ಗುತ್ತಿಗೆದಾರರಿಂದ 2023-24ನೆ ಸಾಲಿನಲ್ಲಿ ನೆಡಲಾದ ಗಿಡಗಳನ್ನು ಜಿಯೋ ಟ್ಯಾಗ್ ಮಾಡಲಾಗಿದೆ. ಶಾಲಾ-ಮಕ್ಕಳು ತಮಗೆ ಟ್ಯಾಗ್ ಮಾಡಿರುವ ಐಡಿಯಿಂದ ಹಾಗೂ ನೀಡಲಾಗಿರುವ ಪಾಸ್‌ವರ್ಡ್ ಬಳಸಿ ‘ನನ್ನ ಮರವನ್ನು ಪರಿಶೀಲಿಸಿ’ ಟ್ಯಾಬ್ ಬಳಸಿ ಗಿಡಗಳ ಬಳಿ ಹೋಗಿ ಗಿಡವನ್ನು ಪರಿಶೀಲಿಸಿ, ಗಿಡದ ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ಆಪ್ ಲೋಡ್ ಮಾಡಬಹುದಾಗಿದೆ. ಗಿಡದ ಬೆಳವಣಿಗೆಯಲ್ಲಿ ಏನಾದರೂ ತೊಂದರೆ ಇದ್ದಲ್ಲಿ ಮರಗಳ ಮಾಹಿತಿಯನ್ನು ದಾಖಲಿಸಲಾಗಲಿದೆ. ದಾಖಲಾತಿಯ ದೂರನ್ನು ಗುತ್ತಿಗೆದಾರರು ಹಾಗೂ ಸಮನ್ವಯರಿಗೆ ಅಲರ್ಟ್ ಕಳುಹಿಸಲಾಗುತ್ತದೆ. ಗುತ್ತಿಗೆದಾರರ ದೂರನ್ನು ಪರಿಶೀಲಿಸಿ ಸರಿಪಡಿಸಲಾಗುತ್ತದೆ. ನಂತರ ಅಲರ್ಟ್ ಕೊನೆಗೊಳ್ಳುತ್ತದೆ.

ಹಸಿರು ರಕ್ಷಕ ವೆಬ್ hasirurakshaka.bbmpgov.in ವೆಬ್‌ ಆ್ಯಪ್‌ನಲ್ಲಿ ಸಾರ್ವಜನಿಕರು 2023-24ನೆ ಸಾಲಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನೆಡಲಾದ ಗಿಡಗಳ ವಿವರಗಳನ್ನು ವೀಕ್ಷಿಸಬಹುದಾಗಿದೆ. ಈ ಲಿಂಕ್‌ನಲ್ಲಿಯೇ ಪಾಲಿಕೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಹಾಯ 2.0 ಗೆ ನೇರವಾಗಿ ಹಸಿರು ರಕ್ಷಕ ಸಂಬಂಧಿಸಿದ ದೂರನ್ನು ಸಹ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಉದ್ಯಾನ ಮಿತ್ರ: ಉದ್ಯಾನವನ ನಿರ್ವಹಣೆಯನ್ನು ವೀಕ್ಷಿಸುವ ಮೊಬೈಲ್ ಅಪ್ಲೀಕೇಷನ್‌ನಲ್ಲಿ ದೈನಂದಿನ ನಿರ್ವಹಣೆ ಕಾಮಗಾರಿಯ ತಪಾಸಣೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಲ್ಪಿಸಲಾದ ಮೊಬೈಲ್ ಆಪ್ಲೀಕೇಷನ್ ಆಗಿದ್ದು, ಈ ಅಪ್ಲಿಕೇಷನ್‌ನಿಂದ ತುರ್ತಾಗಿ ದೈನಂದಿನ ನಿರ್ವಹಣೆಯ ಕುರಿತು ಮೇಲಾಧಿಕಾರಿಗಳು ಕಾಲಕಾಲಕ್ಕೆ ವರದಿಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ. ತಪಾಸಣೆಯ ವೇಳೆಯಲ್ಲಿ ಅಪ್ಲಿಕೇಷನ್‌ನಲ್ಲಿ ವಿವಿಧ ನಿರ್ವಹಣೆಯ ಅಂಶಗಳಾದ ಒಳಹರಿವಿನ ಸ್ವಚ್ಛತೆ, ಕಸ ಗುಡಿಸುವಿಕೆ, ಕಳೆ ತೆಗೆಯುವುದು, ಲಾನ್ ಮೂವಿಂಗ್, ಟ್ರೀಮಿಂಗ್, ಮರಗಿಡಗಳಿಗೆ ನೀರುಣಿಸುವಿಕೆ ಇತರೆ ನಿರ್ವಹಣೆಯ ಕಾಮಗಾರಿಗಳ ಬಗ್ಗೆ ದಿನನಿತ್ಯ ಪರಿಶೀಲಿಸಿ, ಛಾಯಾಚಿತ್ರಗಳೊಂದಿಗೆ ಅಪ್‌ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಈ ಅಪ್ಲಿಕೇಷನ್ ಬಳಕೆಯಿಂದ ಮೇಲಾಧಿಕಾರಿಗಳು, ದೈನಂದಿನ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವ ಅವಕಾಶವಿದೆ. ತ್ವರಿತವಾಗಿ ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರವನ್ನು ನೀಡಬಹುದಾಗಿದೆ. ಉದ್ಯಾನವನಗಳ ನಿರ್ವಹಣೆಯ ಅಪ್ಲಿಕೇಷನ್ ಹಾಗೂ ವೆಬ್ ಸೈಟ್‌ನಲ್ಲೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ https://pms.bbmpgov.in/park ಲಿಂಕ್‌ನ ಮೂಲಕ ಉದ್ಯಾನವನ ಸೌಲಭ್ಯಗಳ ಬಗ್ಗೆ ಮಾಹಿತಿ ಉದ್ಯಾನವನಗಳ ನಿರ್ವಹಣೆಯ ಕುರಿತು ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಈ ಲಿಂಕ್‌ನಲ್ಲಿಯೇ ಪಾಲಿಕೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಹಾಯ 2.0ಗೆ ನೇರವಾಗಿ ಉದ್ಯಾನವನಗಳಿಗೆ ಸಂಬಂಧಿಸಿದ ದೂರನ್ನು ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಒಂದು ತಿಂಗಳಿನ ತಪಾಸಣೆಯ ಮಾಹಿತಿಗಳನ್ನು ಯಾವುದೇ ಸಂದರ್ಭದಲ್ಲಿ ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಉದ್ಯಾನ ಮಿತ್ರ- ಉದ್ಯಾನ ನಿರ್ವಹಣೆಯ ಉಸ್ತುವಾರಿಯನ್ನು ವಹಿಸಲು ಇಚ್ಚಿಸಿರುವ ಸಾರ್ವಜನಿಕರ ಆಯ್ಕೆಗಾಗಿ ನೋಂದಣಿ ಪ್ರಕ್ರಿಯೆನ್ನು ಹೊಸದಾಗಿ ಆರಂಭಿಸಬಹುದಾಗಿದೆ.

ಕೆರೆ ಮಿತ್ರ ಮೊಬೈಲ್ ಅಪ್ಲಿಕೇಷನ್: ಇದು ದೈನಂದಿನ ಕೆರೆ ನಿರ್ವಹಣೆ ಕಾಮಗಾರಿಯ ತಪಾಸಣೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಲ್ಪಿಸಲಾದ ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಈ ಅಪ್ಲಿಕೇಷನ್‌ನಿಂದ ತುರ್ತಾಗಿ ದೈನಂದಿನ ನಿರ್ವಹಣೆಯ ಕುರಿತು ಮೇಲಾಧಿಕಾರಿಗಳು ಕಾಲಕಾಲಕ್ಕೆ ವರದಿಯನ್ನು ಪಡೆಯುತ್ತಾರೆ. ತಪಾಸಣೆಯ ವೇಳೆಯಲ್ಲಿ ಅಪ್ಲಿಕೇಷನ್‌ನಲ್ಲಿ ಕಲ್ಪಿಸಲಾದ ವಿವಿಧ ನಿರ್ವಹಣೆಯ ಅಂಶಗಳಾದ ಒಳಹರಿವಿನ ಸ್ವಚ್ಛತೆ, ಹೊರಹರಿವಿನ ಸ್ವಚ್ಛತೆ, ಪಥ ಗುಡಿಸುವಿಕೆ, ಕಳೆ ತೆಗೆಯುವುದು, ನೀರಿನಲ್ಲಿರುವ ಕಳೆಯನ್ನು ತೆಗೆಯುವುದು, ಲಾನ್ ಟ್ರೀಮಿಂಗ್, ಮರಗಿಡಗಳಿಗೆ ನೀರುಣಿಸುವಿಕೆ ಇತರೆ ನಿರ್ವಹಣೆಯ ಕಾಮಗಾರಿಗಳ ಬಗ್ಗೆ ದಿನನಿತ್ಯ ಪರಿಶೀಲಿಸಿ, ಛಾಯಾಚಿತ್ರಗಳೊಂದಿಗೆ ಅಪ್​ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಈ ಅಪ್ಲಿಕೇಷನ್ ಬಳಕೆಯಿಂದ ಮೇಲಾಧಿಕಾರಿಗಳು, ದೈನಂದಿನ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವ ಅವಕಾಶವಿದೆ. ತ್ವರಿತವಾಗಿ ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರವನ್ನು ನೀಡಬಹುದಾಗಿದೆ. ಕೆರೆಗಳ ನಿರ್ವಹಣೆಯ ಅಪ್ಲಿಕೇಷನ್ ಹಾಗೂ ವೆಬ್​ಸೈಟ್‌ನಲ್ಲೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ lms.bbmpgov.in/lake ಲಿಂಕ್ ಮೂಲಕ ಕೆರೆಯ ಸೌಲಭ್ಯಗಳ ಬಗ್ಗೆ ಮಾಹಿತಿ, ಕೆರೆಯ ನಿರ್ವಹಣೆಯ ಕುರಿತು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯ ಹಾಜರಾತಿಯನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಈ ಲಿಂಕ್‌ನಲ್ಲಿಯೇ ಪಾಲಿಕೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಹಾಯ 2.0ಗೆ ನೇರವಾಗಿ ಕೆರೆಗಳಿಗೆ ಸಂಬಂಧಿಸಿದ ದೂರು ನೀಡಲು ಅವಕಾಶವನ್ನೂ ಕಲ್ಪಿಸಲಾಗಿದೆ.

ಒಂದು ತಿಂಗಳಿನ ತಪಾಸಣೆಯ ಮಾಹಿತಿಗಳನ್ನು ಯಾವುದೇ ಸಂದರ್ಭದಲ್ಲಿ ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಕೆರೆ ಮಿತ್ರ- ಕೆರೆಯ ನಿರ್ವಹಣೆಯ ಉಸ್ತುವಾರಿಯನ್ನು ವಹಿಸಲು ಇಚ್ಚಿಸಿರುವ ಸಾರ್ವಜನಿಕರ ಆಯ್ಕೆಗಾಗಿ ನೋಂದಣಿ ಪ್ರಕ್ರಿಯೆನ್ನು ಹೊಸದಾಗಿ ಆರಂಭಿಸಲಾಗುವುದು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಆರ್ಥಿಕ ಜನಗಣತಿಯ ಮೊಬೈಲ್ ಆಪ್ ಬಿಡುಗಡೆ ಮಾಡಿದ ಮೈಸೂರು ಡಿಸಿ

ABOUT THE AUTHOR

...view details