ಬೆಂಗಳೂರು: ನಗರದಲ್ಲಿ ಅನಧಿಕೃತ ಬ್ಯಾನರ್, ಫ್ಲೆಕ್ಸ್ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ (ಕೆಪಿಸಿಸಿ) ಅಳವಡಿಸಲಾಗಿದ್ದ ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸಿ 50 ಸಾವಿರ ದಂಡ ವಿಧಿಸಲಾಗಿದೆ.
ವಸಂತನಗರ ವಾರ್ಡ್-93ರ ವ್ಯಾಪ್ತಿಯ ಕ್ವೀನ್ಸ್ ರಸ್ತೆಯ ಸ್ವತ್ತಿನ ಸಂಖ್ಯೆ:12/1 ಮಿಲ್ಲರ್ ಟ್ಯಾಂಕ್ ಬೆಡ್ ಪ್ರದೇಶದಲ್ಲಿ ಬ್ಯಾನರ್ ಹಾಕಲು ಅಧಿಕೃತವಾಗಿ ಪರವಾನಗಿ, ಅನುಮತಿ ಪಡೆದಿಲ್ಲ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ 50,000 ರೂ ದಂಡ ವಿಧಿಸಿ, ಮುಖ್ಯ ಆಯುಕ್ತರ ಖಾತೆಗೆ ದಂಡ ಮೊತ್ತ ಪಾವತಿಸುವಂತೆ ಆದೇಶಿಸಲಾಗಿದೆ ಎಂದಿದೆ.
ಅಧಿಕಾರಿಗಳಿಗೆ ಖಡಕ್ ಸೂಚನೆ:ಆಗಸ್ಟ್ 17ರಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸೂಚನೆಯ ಮೇರೆಗೆ ನಗರದಾದ್ಯಂತ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದರು. ಉಪಮುಖ್ಯಮಂತ್ರಿಗಳ ಆದೇಶದ ಮೇರೆಗೆ ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳು ಕಂಡರೆ 50 ಸಾವಿರ ರೂ. ದಂಡ ನಿಗದಿ ಮಾಡಲಾಗಿತ್ತು. ದಂಡದೊಂದಿಗೆ ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಬಹುತೇಕ ಕಡೆ ಪಾಲಿಕೆ ಸಿಬ್ಬಂದಿ ತೆರವು ಕಾರ್ಯ ಕೈಗೊಂಡಿದ್ದರು. ಇದಕ್ಕೂ ಮುನ್ನ, ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಇತ್ಯಾದಿಗಳನ್ನು ತೆರವುಗೊಳಿಸುವ ಜವಾಬ್ದಾರಿ ಸಂಬಂಧಪಟ್ಟ ಜಂಟಿ ಆಯುಕ್ತ ಮತ್ತು ಮುಖ್ಯ ಎಂಜಿನಿಯರ್ ಅವರದ್ದಾಗಿರುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದರು.
ನಗರದಲ್ಲಿ ಒಂದೇ ಒಂದು ಅನಧಿಕೃತ ಪ್ಲೆಕ್ಸ್ ಕಂಡುಬಂದರೆ, ಪಾಲಿಕೆ ಹಾಗೂ ರಾಜ್ಯ ಸರಕಾರ ತಲಾ 50 ಸಾವಿರ ರೂ.ಗಳನ್ನು ಠೇವಣಿ ಇಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಸಂಬಂಧ ಕೂಡಲೇ ತುರ್ತು ಕ್ರಮ ಕೈಗೊಂಡು ಅನಧಿಕೃತ ಹೋರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್ ಹಾಗು ಎಲ್‌ಇಡಿ ಇನ್ನಿತರೆ ಜಾಹಿರಾತು ಫಲಕಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಹಾಗೆಯೇ ಈ ಬಗ್ಗೆ ಅಂಕಿ-ಅಂಶದ ದಾಖಲೆಗಳ ಸಮೇತ ಅನುಪಾಲನಾ ವರದಿಯನ್ನು ಸಲ್ಲಿಸಲು ಮುಖ್ಯ ಆಯುಕ್ತರು ಸೂಚಿಸಿದ್ದರು.
ಇದನ್ನೂ ಓದಿ:ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ