ಬೆಂಗಳೂರು: ನವೆಂಬರ್ 15ರೊಳಗೆ ನಗರದಲ್ಲಿನ ಗುಂಡಿಗಳನ್ನು ಮುಚ್ಚದಿದ್ದರೆ ಅಮಾನತು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪಾಲಿಕೆ ಸಿಬ್ಬಂದಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಪಾಲಿಕೆಯು ಅಧಿಕಾರಿಗಳಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಎರಡು ಬಾರಿ ನೋಟಿಸ್ ನೀಡಿದ್ದು, ಮೊದಲ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ. ಇನ್ನೊಂದು ನೋಟಿಸ್‌ನಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಸಹಾಯಕ ಇಂಜಿನಿಯರ್, ಕಾರ್ಯಪಾಲಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಮುಖ್ಯ ಇಂಜಿನಿಯರ್‌ಗಳಿಗೆ ಈಗಾಗಲೇ ನೋಟಿಸ್ ನೀಡಿದ್ದು, ಗಡುವಿನೊಳಗೆ ಅಧಿಕಾರಿಗಳು ಗುಂಡಿಗಳನ್ನು ಮುಚ್ಚುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಗುಂಡಿಗಳಿಂದ ಕೂಡಿದ ರಸ್ತೆಗಳು: ಬಸ್ ಸಂಚಾರದಲ್ಲಿ ವ್ಯತ್ಯಯ, ವಿದ್ಯಾರ್ಥಿಗಳ ಪರದಾಟ
ರಸ್ತೆ ಕುರಿತು ಪಾಲಿಕೆ ಹಾಗೂ ಸರ್ಕಾರಕ್ಕೆ ಈಗಾಗಲೇ ನಿರ್ದೇಶನ ನೀಡುವಂತೆ ಕೋರಿ ಕೋರಮಂಗಲ ನಿವಾಸಿ ವಿಜಯನ್ ಮೆನನ್ ಮತ್ತು ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಳೆ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪಾಲಿಕೆ ವ್ಯಾಪ್ತಿಯಲ್ಲಿರುವ ರಸ್ತೆ ಗುಂಡಿಗಳಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಪಾಲಿಕೆ ಮಾತ್ರ ರಸ್ತೆ ಗುಂಡಿ ಮುಚ್ಚಲು ಯಾವುದೇ ತಂತ್ರಜ್ಞಾನ ಬಳಕೆ ಮಾಡುತ್ತಿಲ್ಲ. ಗುಂಡಿಗಳನ್ನು ಸರಿಪಡಿಸುವ ಪ್ರಕ್ರಿಯೆಯಲ್ಲಿ ಪಾಲಿಕೆಯು ಸಂಪೂರ್ಣವಾಗಿ ವಿಫಲವಾಗಿದ್ದು, ಸದ್ಯಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಪಾಲಿಕೆಗೆ ಸೂಚಿಸಿ ವಿಚಾರಣೆಯನ್ನು ನ.2ಕ್ಕೆ ಮುಂದೂಡಿದೆ.
ಇದನ್ನೂ ಓದಿ:ಹೊಂಡಾ ಸಿಟಿಯಾಗ್ತಿದೆ ಹುಬ್ಬಳ್ಳಿ..: ಸ್ಮಾರ್ಟ್ಸಿಟಿಯಲ್ಲಿ ಹತ್ತಾರು ಸಮಸ್ಯೆ; ಪ್ರಯಾಣಿಕರ ನಿತ್ಯ ಪರದಾಟ