ಬೆಂಗಳೂರು:ಹೊಸದಾಗಿ ಡಾಂಬರೀಕರಣ ಮಾಡಿದ್ದ ರಸ್ತೆಗಳನ್ನು ಅಗೆದ ಆರೋಪ ಪ್ರಕರಣ ಸಂಬಂಧ ಟೆಲಿಕಾಂ ಸಂಸ್ಥೆಗಳಾದ ಭಾರತಿ ಏರ್‌ಟೆಲ್ ಲಿಮಿಟೆಡ್ ಸೇರಿದಂತೆ ನಾಲ್ಕು ಕಂಪನಿಗಳಿಗೆ ಬಿಬಿಎಂಪಿ ಬರೋಬ್ಬರಿ 80 ಕೋಟಿ ರೂಪಾಯಿ ದಂಡ ವಿಧಿಸಿದೆ.
ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ ಡಾಂಬರೀಕರಣ ಮಾಡಿದ್ದ ರಸ್ತೆಗಳನ್ನು ಅಗೆದು ಒಎಫ್ಸಿ ಡಕ್ಟ್ಗಳನ್ನು ಅಳವಡಿಸಿ ಪಾಲಿಕೆಗೆ ಹತ್ತಾರು ಕೋಟಿ ರೂಪಾಯಿಗಳ ನಷ್ಟ ಉಂಟು ಮಾಡಿರುವ ಆರೋಪ ಕೇಳಿಬಂದಿತ್ತು.
ಬಯೋ ಡಿಜಿಟಲ್ ಫೈಬರ್ ಪ್ರೈ.ಲಿ., ಭಾರತಿ ಏರ್‌ಟೆಲ್ ಲಿಮಿಟೆಡ್, ಟೆಲಿಸಾನಿಕ್ ನೆಟ್ವರ್ಕ್ಸ್ ಹಾಗೂ ವಿಎಸಿ ಟೆಲಿಇನ್ಫಿರಾ ಸೆಲ್ಯೂಷನ್ ಪ್ರೈ.ಲಿ. ವಿರುದ್ಧ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ದಾಖಲೆ ಸಮೇತ ದೂರು ದೂರು ಸಲ್ಲಿಸಿದ್ದರು. ಈ ಸಂಬಂಧ ಸಂಸ್ಥೆಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲು ಮಾಡಿರುವುದಲ್ಲದೇ, ಪ್ರತಿಯೊಂದು ಸಂಸ್ಥೆಗೂ ತಲಾ 20 ಕೋಟಿ ಸೇರಿದಂತೆ ಒಟ್ಟಾರೆ 80 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಾಯ್ನ ನಿಯಮ ಗಾಳಿಗೆ ತೂರಿದ ಕಂಪನಿಗಳು: ಕೇವಲ ಮೂರ್ನಾಲ್ಕು ಅಡಿಗಳಷ್ಟು ಅಗಲದ ಪಾದಚಾರಿ ಮಾರ್ಗಗಳಲ್ಲಿ ಟ್ರಾಯ್ನ ನಿಯಮಗಳನ್ನು ಗಾಳಿಗೆ ತೂರಿ ನೂರಾರು ಅನಧಿಕೃತ ಟೆಲಿಕಾಂ ಟವರ್ಗಳನ್ನು ಅಳವಡಿಸಲಾಗಿತ್ತು. ರಾಜ್ಯ ಉಚ್ಛ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಎಲ್ಲಾ ರಸ್ತೆಗಳಲ್ಲಿನ ಮರಗಳ ಕೊಂಬೆಗಳಲ್ಲಿ ಗೊಂಚಲು ಗೊಂಚಲಾಗಿ ಒಎಫ್ಸಿ ಕೇಬಲ್ಗಳನ್ನು ತೂಗು ಹಾಕಿದ್ದ ಆರೋಪವು ಈ ಸಂಸ್ಥೆಗಳ ಮೇಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ತಗ್ಗಿದ ಮಳೆಯ ಪ್ರಮಾಣ: ರೈನ್ ಬೋ ಲೇಔಟ್ ಸೇರಿದಂತೆ ಹಲವು ಬಡಾವಣೆಗಳು ಯಥಾಸ್ಥಿತಿಯತ್ತ