ಕರ್ನಾಟಕ

karnataka

ETV Bharat / state

ಆರ್​ಟಿಐ ಕಾರ್ಯಕರ್ತನ ಹತ್ಯೆ ಕೇಸ್: ಬಿಬಿಎಂಪಿ ಮಾಜಿ ಸದಸ್ಯೆ ಸೇರಿ 10 ಆರೋಪಿಗಳು ಖುಲಾಸೆ

ಆರ್​ಟಿಐ ಕಾರ್ಯಕರ್ತನ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳನ್ನು ಖುಲಾಸೆಗೊಳಿಸಿ ಹೈಕೋರ್ಟ್ ತೀರ್ಪು ನೀಡಿದೆ.

ಆರ್​ಟಿಐ ಕಾರ್ಯಕರ್ತನ ಹತ್ಯೆ ಕೇಸ್
ಆರ್​ಟಿಐ ಕಾರ್ಯಕರ್ತನ ಹತ್ಯೆ ಕೇಸ್

By

Published : Nov 11, 2022, 9:18 PM IST

ಬೆಂಗಳೂರು: ನಗರದಲ್ಲಿ 2012ರಲ್ಲಿ ನಡೆದಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲು ಪ್ರಾಸಿಕ್ಯೂಷನ್​ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೊರ್ಟ್​, ಆರೋಪಿಗಳಾದ ಬಿಬಿಎಂಪಿ ಮಾಜಿ ಸದಸ್ಯೆ ಸಿ.ಜಿ.ಗೌರಮ್ಮ ಅವರ ಪತಿ ಸಿ.ಗೋವಿಂದರಾಜು ಸೇರಿದಂತೆ 10 ಮಂದಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದನ್ನು ಪ್ರಶ್ನಿಸಿ ಆಜಾದ್‌ ನಗರದ ಮಾಜಿ ಪಾಲಿಕೆ ಸದಸ್ಯೆ ಗೌರಮ್ಮ, ಪತಿ ಸಿ.ಗೋವಿಂದರಾಜು ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್‌ ಮತ್ತು ನ್ಯಾ.ಟಿ.ಜಿ.ಶಿವಶಂಕರೇಗೌಡ ಅವರನ್ನು ಒಳಗೊಂಡ ವಿಭಾಗೀಯಪೀಠ, ಸಾಕ್ಷಿಗಳ ಕೊರತೆ ಹಿನ್ನೆಲೆ ಆರೋಪ ಸಾಬೀತು ಮಾಡುವ ಅಂಶಗಳಿಲ್ಲವೆಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ, ಪ್ರಾಸಿಕ್ಯೂಷನ್‌ ಆರೋಪವನ್ನು ಸಾಬೀತುಪಡಿಸುವಂತಹ ಸೂಕ್ತ, ಸಮಗ್ರ ಹಾಗೂ ಪೂರಕ ಸಾಕ್ಷ್ಯ ಮತ್ತು ದಾಖಲೆಗಳನ್ನು ಸಲ್ಲಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಆರೋಪಿಗಳನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಜೊತೆಗೆ, ನ್ಯಾಯಪೀಠ ಈ ಪ್ರಕರಣದಲ್ಲಿ ಮೃತರ ಪತ್ನಿ ಉಮಾದೇವಿ ಹಾಗೂ ಪುತ್ರ ಕಾರ್ತಿಕ್‌ ಪ್ರಮುಖ ಸಾಕ್ಷಿ ಮತ್ತು ಪ್ರತ್ಯಕ್ಷದರ್ಶಿಗಳಾಗಿದ್ದಾರೆ. ಆದರೆ ಅವರೇ ಪ್ರತಿಕೂಲ ಸಾಕ್ಷ್ಯ ಹೇಳಿದ್ದಾರೆ. ಆ ಮೂಲಕ ಅವರೇ ಪ್ರಾಸಿಕ್ಯೂಷನ್‌ ಬೆಂಬಲಿಸಿಲ್ಲ. ಅವರು ತನಿಖಾಧಿಕಾರಿಗಳ ಮುಂದೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿಲ್ಲ. 2013ರ ಜನವರಿಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಆರೋಪಿಗಳ ಪರೇಡ್​​ನಲ್ಲಿ ಕೊಲೆಯಲ್ಲಿ ಭಾಗಿಯಾದ ಆರೋಪಿಗಳನ್ನೂ ಸಹ ಗುರುತಿಸಿಲ್ಲ ಎಂಬ ಅಂಶಗಳನ್ನು ದಾಖಲಿಸಿ ಆರೋಪಿಗಳನ್ನು ಖುಲಾಸೆಗೆ ಕಾರಣ ನೀಡಿದೆ.

ಜೊತೆಗೆ 99 ಸಾಕ್ಷ್ಯಗಳಲ್ಲಿ 44 ಮಂದಿ ಪ್ರಾಸಿಕ್ಯೂಷನ್‌ ಪರವಾಗಿ ಸಾಕ್ಷ್ಯ ನುಡಿದಿದ್ದಾರೆ. ಪ್ರಾಸಿಕ್ಯೂಷನ್‌ ಅವುಗಳ ಆಧಾರದ ಮೇಲೆ ನಿಂತಿದೆ. ಆದರೆ ಆರೋಪಿಗಳು ಕ್ರಿಮಿನಲ್‌ ಉದ್ದೇಶದಿಂದಲೇ ಕೊಲೆ ಮಾಡಿದ್ದಾರೆ ಎಂಬ ಅರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?ಆರ್‌ಟಿಐ ಕಾರ್ಯಕರ್ತನೂ ಆಗಿದ್ದ 'ಮಹಾ ಪ್ರಚಂಡ' ಪತ್ರಿಕೆ ಸಂಪಾದಕ ಲಿಂಗರಾಜು, ಅಜಾದ್‌ ನಗರದ ಪಾಲಿಕೆ ಸದಸ್ಯೆ ಗೌರಮ್ಮ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಸಿದ್ದಾರೆಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಲೋಕಾಯುಕ್ತ ಪೊಲೀಸರು ಗೌರಮ್ಮ ಮನೆಯ ಮೇಲೆ ದಾಳಿ ನಡೆಸಿದ್ದರು. ಆನಂತರ 2012ರ ನ.20ರಂದು ಆರೋಪಿಗಳು ಮಚ್ಚು ಹಾಗೂ ಕತ್ತಿಗಳಿಂದ ಮೈಸೂರು ರಸ್ತೆಯ ಬಿಎಂಕೆ ಬಡಾವಣೆಯ ಲಿಂಗರಾಜು ಅವರ ನಿವಾಸದ ಎದುರೇ ಅವರನ್ನು ಹತ್ಯೆ ಮಾಡಿದ್ದರು.

ಹೈಕೋರ್ಟ್‌ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ವಿಶೇಷ ತಂಡವನ್ನು ರಚನೆ ಮಾಡಿತ್ತು. ತಂಡ ಪಾಲಿಕೆ ಸದಸ್ಯೆ ಗೌರಮ್ಮ, ಪತಿ ಗೋವಿಂದರಾಜು, ರಂಗಸ್ವಾಮಿ, ಆರ್‌. ಶಂಕರ್‌, ರಾಘವೇಂದ್ರ ಚಂದ್ರ, ಶಂಕರ್‌ ಅಲಿಯಾಸ್‌ ಗುಂಡ, ಉಮಾಶಂಕರ್‌, ಸಿ.ವೇಲು, ಜಹೀರ್‌, ಸುರೇಶ್‌ ಮತ್ತು ಲೋಕನಾಥ್‌ ಸೇರಿ 10 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಆ ಕುರಿತು ವಿಚಾರಣೆ ನಡೆಸಿ ಬಂಧಿಸಿತ್ತು. ಅವರ ವಿರುದ್ಧ ಆರೋಪಪಟ್ಟಿಯನ್ನೂ ಸಹ ದಾಖಲಿಸಿತ್ತು.

ಆ ಕುರಿತು ವಿಚಾರಣೆ ನಡೆಸಿದ್ದ ಹೆಚ್ಚುವರಿ ಸಿಟಿ ಮತ್ತು ಸಿವಿಲ್‌ ನ್ಯಾಯಾಲಯ 2020ರ ಅ.28ರಂದು ಎಲ್ಲ 10 ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿ, ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಅದನ್ನು ಪ್ರಶ್ನಿಸಿ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರು.

(ಓದಿ: ಕಾಫಿ ಪೌಡರ್​ನಲ್ಲಿ ಕಲಬೆರಕೆ ಮಾಡಿದ್ದ ಅಪರಾಧಿಗೆ ಶಿಕ್ಷೆ: ಕೆಳ ಕೋರ್ಟ್​ ಆದೇಶ ಎತ್ತಿಹಿಡಿದ ಹೈಕೋರ್ಟ್)

ABOUT THE AUTHOR

...view details