ಬೆಂಗಳೂರು: ಬಿಬಿಎಂಪಿ ಚುನಾವಣಾ ಸಿದ್ದತಾ ಸಭೆಯಲ್ಲಿ ಬೆಂಗಳೂರು ಸಚಿವರಲ್ಲಿ ನಾನು ಹಿರಿಯ ನಾನು ಹಿರಿಯ ಎನ್ನುವ ಜಟಾಪಟಿ ನಡೆದಿದೆ. ಸಚಿವ ಸೋಮಣ್ಣ ಮತ್ತು ಅಶೋಕ್ ನಡುವೆ ಸೀನಿಯಾರಿಟಿ ಕಾಂಪ್ಲೆಕ್ಸ್ ತಿಕ್ಕಾಟ ಪಕ್ಷದ ಮುಖಂಡರ ಮುಂದೆಯೇ ಅನಾವರಣಗೊಂಡಿದೆ.
ಬಿಬಿಎಂಪಿ ಚುನಾವಣೆ ಸಿದ್ಧತೆ ಕುರಿತು ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಹಾನಗರದ ಸಚಿವರು, ಶಾಸಕರು, ಪ್ರಮುಖ ಮುಖಂಡರ ಜೊತೆ ಸಭೆ ನಡೆಸಲಾಯಿತು. ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಸದರಾದ ಡಿ.ವಿ ಸದಾನಂದಗೌಡ, ತೇಜಸ್ವಿ ಸೂರ್ಯ, ಸಚಿವರಾದ ಆರ್. ಅಶೋಕ್, ಬೈರತಿ ಬಸವರಾಜ್, ಗೋಪಾಲಯ್ಯ, ವಿ.ಸೋಮಣ್ಣ, ಶಾಸಕರಾದ ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಮತ್ತು ಎಂ.ಕೃಷ್ಣಪ್ಪ ಭಾಗಿಯಾಗಿದ್ದರು.
ಈ ವೇಳೆ, ಬೆಂಗಳೂರು ಉಸ್ತುವಾರಿ ವಿಷಯದ ಕುರಿತು ಪ್ರಸ್ತಾಪವಾಯಿತು. ಬಿಬಿಎಂಪಿ ಚುನಾವಣೆ ಸಮಯದಲ್ಲಿ ಉಸ್ತುವಾರಿ ಸಚಿವರು ತಿಂಗಳುಗಟ್ಟಲೆ ನಗರದಲ್ಲೇ ಇದ್ದು ಪ್ರಚಾರ ಕಾರ್ಯ ನೋಡಿಕೊಳ್ಳಬೇಕು. ಸದ್ಯ ಮುಖ್ಯಮಂತ್ರಿಗಳು ಬೆಂಗಳೂರು ನಗರದ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ರಾಜ್ಯ ಪ್ರವಾಸ ಮಾಡಬೇಕಾಗಲಿದೆ. ಹಾಗಾಗಿ ಚುನಾವಣೆವರೆಗಾದರೂ ಪೂರ್ಣ ಪ್ರಮಾಣದ ಸಮಯ ನೀಡುವ ಉಸ್ತುವಾರಿ ಸಚಿವರ ನೇಮಕ ಮಾಡುವಂತೆ ಬೆಂಗಳೂರು ಶಾಸಕರು ಸಭೆಯಲ್ಲಿ ಪ್ರಸ್ತಾಪ ಮಾಡಿದರು.