ಬೆಂಗಳೂರು:ಅವಧಿ ಮುಗಿದಿರುವ ಬಿಬಿಎಂಪಿಗೆ ಯಾವಾಗ ಬೇಕಾದರೂ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಾಗುವ ಕಾರ್ಯತಂತ್ರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಭೆ ನಡೆಸಿದರು.
ಬೆಂಗಳೂರು ನಗರ ಬಿಜೆಪಿ ಕಚೇರಿಯಲ್ಲಿ ಬೆಂಗಳೂರಿನ ಬಿಜೆಪಿ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಬೆಂಗಳೂರಿನ ಮೂವರು ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿಭಾಗ ಉಸ್ತುವಾರಿಗಳು, ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ 15 ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು ಪದಾಧಿಕಾರಿಗಳ ಜೊತೆ ಕಟೀಲ್ ಸಭೆ ಬಿಜೆಪಿ ವಾರ್ಡ್ಗಳಲ್ಲಿನ ಸ್ಥಿತಿಗತಿ, ಹೊಸದಾಗಿ ಯಾವ ವಾರ್ಡ್ ಗಳಲ್ಲಿ ಗೆಲ್ಲಬಹುದು. ಪಕ್ಷಕ್ಕೆ ಎಲ್ಲಿ ಯಾವ ರೀತಿ ಅನುಕೂಲಕರ ವಾತಾವರಣ ಇದೆ. ವಾರ್ಡ್ಗಳ ವಾರು ಸಂಘಟನೆ ಯಾವ ರೀತಿ ಇದೆ. ಪದಾಧಿಕಾರಿಗಳ ಕಾರ್ಯವೈಖರಿ ಸೇರಿದಂತೆ ಚುನಾವಣೆ ಗೆಲ್ಲುವ ಕುರಿತು ಎಲ್ಲಾ ಆಯಾಮದಲ್ಲಿಯೂ ಸವಿಸ್ತಾರವಾಗಿ ಚರ್ಚೆ ನಡೆಸಿದರು.
ಇದನ್ನೂ ಓದಿ:ಯತ್ನಾಳ್- ಎಂ.ಪಿ.ರೇಣುಕಾಚಾರ್ಯ ದಿಢೀರ್ ಭೇಟಿ: ಒಂದೂವರೆ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆ!
ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದರೂ, ಅಧಿಕಾರ ಹಿಡಿಯಲ್ಲಿ ವಿಫಲವಾಗಿತ್ತು. ಆದರೂ ಜೆಡಿಎಸ್ ಸಖ್ಯದೊಂದಿಗೆ ಕಡೆಯ ಅವಧಿಯಲ್ಲಿ ಆಡಳಿತ ನಡೆಸಿತ್ತು. ಇದೀಗ ಹೊಸದಾಗಿ ಚುನಾವಣೆ ನಡೆದಾಗಲೂ ಅಧಿಕಾರಕ್ಕೆ ಬರಲು ಅಗತ್ಯ ತಂತ್ರಗಾರಿಕೆ ನಡೆಸಲು ಕೇಸರಿ ಪಡೆ ಯತ್ನಿಸುತ್ತಿದೆ. ಆಗಾಗ ಪಾಲಿಕೆ ಚುನಾವಣೆ ವಿಷಯ ಇರಿಸಿಕೊಂಡೇ ಸಭೆ ನಡೆಸಲಾಗುತ್ತಿದೆ.
ಪಾಲಿಕೆ ಗದ್ದುಗೆ ಹಿಡಿಯಲು ಕೋವಿಡ್ ವಾರ್ ರೂಂ ತಂತ್ರ:
ಕೋವಿಡ್ ಸಮಯದಲ್ಲಿ ಸರ್ಕಾರದ ಜೊತೆ ಪಕ್ಷ ಕೈಜೋಡಿಸಿ ಕೆಲಸ ಕಾರ್ಯದಲ್ಲಿ ತೊಡಗುವ ಮೂಲಕ ರಾಜಕೀಯವಾಗಿ ಲಾಭ ಗಳಿಸುವ ತಂತ್ರ ಅನುಸರಿಸುತ್ತಿದೆ. ಕೋವಿಡ್ ಸೋಂಕಿತರಿಗೆ ಅಗತ್ಯ ನೆರವು ಕಲ್ಪಿಸಿ ಸರ್ಕಾರದ ಜೊತೆ ಸಂಪರ್ಕ ಸಾಧಿಸಿ ಚಿಕಿತ್ಸೆ, ವೈದ್ಯಕೀಯ ಸೇವೆ, ಔಷಧಿ, ನೆರವು ಕಲ್ಪಿಸುವ ಮೂಲಕ ಜನರ ಒಲವು ಗಳಿಸಲು ಮುಂದಾಗಿದೆ. ಇದಕ್ಕಾಗಿ ಬಿಬಿಎಂಪಿ ವಾರ್ಡ್ಗಳಲ್ಲಿ ವಾರ್ ರೂಂ ತೆರೆಯುವ ಬಗ್ಗೆ ಚರ್ಚೆ ಮಾಡಲಾಗಿದ್ದು, ಕೋವಿಡ್ ನಿರ್ವಹಣಾ ಕಾರ್ಯದಲ್ಲಿ ಸರ್ಕಾರಕ್ಕೆ ಪಕ್ಷ ಕೈಜೋಡಿಸುತ್ತಿದೆ.
ಜಾಹೀರಾತು:- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ