ಕರ್ನಾಟಕ

karnataka

ETV Bharat / state

ಬಿಬಿಎಂಪಿ ಮಹಾಪೌರರ ಪಕ್ಕ ಕೂರದಿರಲು ಉಪಮೇಯರ್ ತೀರ್ಮಾನ... ಭದ್ರೇಗೌಡರ ಈ ನಡೆಗೆ ಕಾರಣ ಏನು? - etv bharat

ದೋಸ್ತಿ ಪಕ್ಷಗಳ ನಡುವಿನ ವೈಮನಸ್ಸು ಹೆಚ್ಚಾಗುತ್ತಿದೆ. ರಾಜ್ಯ ರಾಜಕಾರಣದಲ್ಲಿ ದೋಸ್ತಿಗಳ ನಡುವೆ ಕೇಳಿ ಬರುತ್ತಿದ್ದ ಅಸಮಾಧಾನದ ಹೊಗೆ ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲೂ ಕೇಳಿ ಬರುತ್ತಿದೆ. ಅಸಲಿಗೆ ಏನಾಗಿರಬಹುದು..!

ಉಪಮೇಯರ್ ಭದ್ರೇಗೌಡ

By

Published : Jun 22, 2019, 1:48 PM IST

ಬೆಂಗಳೂರು:ಬಿಬಿಎಂಪಿ ಉಪಮೇಯರ್, ಜೆಡಿಎಸ್ ಸದಸ್ಯರೂ ಆದ ಭದ್ರೇಗೌಡ, ಕಾಂಗ್ರೆಸ್ ನಾಯಕರ ನಡೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇದೇ 28ರಂದು ನಡೆಯಲಿರುವ ಪಾಲಿಕೆಯ ಮಾಸಿಕ ಸಭೆಯಲ್ಲಿ ಮಹಾಪೌರರ ಪಕ್ಕ ಇರುವ ಉಪಮಹಾಪೌರರ ಕುರ್ಚಿಯಲ್ಲಿ ನಾನು ಕೂರವುದಿಲ್ಲ ಎಂದು ತೀರ್ಮಾನ ಮಾಡಿದ್ದಾರೆ. ಅಲ್ಲದೇ ಅಂದು ಕೌನ್ಸಿಲ್​ ಸಭೆಯಲ್ಲೇ ಇದ್ದು ಪ್ರತಿಭಟಿಸಿ ಸ್ಪಷ್ಟನೆ ಕೇಳುವುದಾಗಿ ಅವರೇ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ನಾಗಪುರ ವಾರ್ಡ್​ನಲ್ಲಿ ಪಾಲಿಕೆಯ ಕಲ್ಯಾಣ ಯೋಜನೆಯಡಿ ಬಡವರಿಗೆ 42 ಒಂಟಿಮನೆಗಳ ನಿರ್ಮಾಣ ಮಾಡಲಾಗಿದ್ದು ನಿನ್ನೆ ಅವುಗಳ ಉದ್ಘಾಟನೆ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಆದ್ರೆ ಈ ಕಾರ್ಯಕ್ರಮಕ್ಕೆ ನಿಗದಿಯಾದಂತೆ ಉಪಮುಖ್ಯಮಂತ್ರಿ ಡಾ‌.ಜಿ.ಪರಮೇಶ್ವರ್, ಮೇಯರ್ ಗಂಗಾಂಬಿಕೆ, ಆಡಳಿತ ಪಕ್ಷದ ನಾಯಕ ವಾಜಿದ್ ಯಾರೂ ಬಂದಿರಲಿಲ್ಲ.

ಡಿಸಿಎಂ- ಮೇಯರ್ ವಿರುದ್ದ ಗರಂ ಆದ ಉಪಮೇಯರ್ ಭದ್ರೇಗೌಡ

ಉಪಮೇಯರ್ ಭದ್ರೇಗೌಡ ನಿನ್ನೆಯೇ ಕಾಂಗ್ರೆಸ್ ನಾಯಕರ ನಡೆ ವಿರುದ್ಧ ಕಿಡಿಕಾರಿದ್ದರು. ಇದು ಉಪಮೇಯರ್ ಸ್ಥಾನಕ್ಕೆ ಅವಮಾನ ಮಾಡಿದಂತೆ. ಅಷ್ಟೇ ಅಲ್ಲದೆ ಎಸ್ಸಿ-ಎಸ್ಟಿ ಸಮಾಜದವರಿಗೆ ಅವಮಾನ ಮಾಡಿದಂತೆ. ಮೇಯರ್ ತಮ್ಮ ಸ್ಥಾನ ಮರೆತು ರಾಜಕೀಯದ ಒಳಸಂಚಿನಿಂದ ನನಗೆ ಅವಮಾನ ಮಾಡಿದ್ದಾರೆಂದು ಅಸಮಾಧಾನ ಹೊರಹಾಕಿದ್ದರು.

ಹೈಟೆನ್ಷನ್ ತಂತಿ ಕೆಳಗಡೆ ಮನೆಗಳು ನಿರ್ಮಾಣವಾಗಿದ್ದರಿಂದ ಇದು ಕಾನೂನುಬಾಹಿರ ಎಂದು ತಿಳಿದು ಡಿಸಿಎಂ ಪರಮೇಶ್ವರ್ ಹಾಗೂ ಮೇಯರ್ ಗಂಗಾಂಬಿಕೆ ಉದ್ಘಾಟನೆಗೆ ಗೈರಾಗಿದ್ದರು. ಆದ್ರೆ ಈ ವಿಚಾರ ಉಪಮೇಯರ್ ಅವರನ್ನು ಕೆಂಡಾಮಂಡಲವಾಗುವಂತೆ ಮಾಡಿದೆ.

ಕಾಂಗ್ರೆಸ್ ನಾಯಕರ ನಡೆ ಬಗ್ಗೆ ಅಸಮಾಧಾನ ಹೊರಹಾಕಿದ ಉಪಮೇಯರ್ ಭದ್ರೇಗೌಡ

ಸೌಜನ್ಯಕ್ಕಾದರೂ ಬರಬೇಕಿತ್ತು. ಆದ್ರೆ ಅವರು ಹಾಗೆ ಮಾಡಲಿಲ್ಲ ಎಂದು ಅಸಮಾಧಾನ ತೋಡಿಕೊಂಡಿರುವ ಉಪಮೇಯರ್ ಭದ್ರೇಗೌಡ, ನಗರದ 198 ಕಾರ್ಪೋರೇಟರ್ಸ್ ಭಾಗಿಯಾಗುವ ಪಾಲಿಕೆಯ ಕೌನ್ಸಿಲ್ ಸಭೆಯಲ್ಲೇ ನ್ಯಾಯ ಕೇಳುತ್ತೇನೆ. ಈ ಬಗ್ಗೆ ಪ್ರತಿಭಟಿಸಲೂ ಮುಂದಾಗುತ್ತೇನೆ ಎಂದಿದ್ದಾರೆ.

ಕೌನ್ಸಿಲ್ ಸಭೆಯಲ್ಲೇ ಮೇಯರ್​ ಅವರಿಂದ ಅಂತರ ಕಾಯ್ದುಕೊಂಡು ಪಕ್ಕದ ಕುರ್ಚಿಯಲ್ಲಿ ಕೂರದೇ ಪ್ರತೀಕಾರ ತೀರಿಸಿಕೊಳ್ಳಲು ಉಪಮೇಯರ್ ತೀರ್ಮಾನಿಸಿದ್ದಾರೆ ಎನ್ನುವುದು ರಾಜಕೀಯ ಲೆಕ್ಕಾಚಾರ.

ಕೌನ್ಸಿಲ್ ವೇದಿಕೆಯಲ್ಲಿ ಮೇಯರ್ ಬಲಭಾಗದಲ್ಲಿ ಉಪಮಹಾಪೌರರು ಹಾಗೂ ಎಡಭಾಗದಲ್ಲಿ ಆಯುಕ್ತರು ಕುಳಿತು ಸಭೆ ನಡೆಸುವುದು ಶಿಷ್ಟಾಚಾರ. ಈಗ ಮೇಯರ್ ಮೇಲೆಯೇ ಅಸಮಾಧಾನಗೊಂಡಿರುವ ಉಪಮೇಯರ್, ಅವರ ಪಕ್ಕ ಕೂರುವುದಿಲ್ಲ ಎಂದು ತೀರ್ಮಾನ ತೆಗೆದುಕೊಂಡಿರುವುದರಿಂದ ಇದು ಯಾವ ಮಟ್ಟಕ್ಕೆ ಹೋಗಲಿದೆ ಅನ್ನೋದನ್ನು ಕಾದು ನೋಡಬೇಕು.

ABOUT THE AUTHOR

...view details