ಬೆಂಗಳೂರು:ಕಳೆದ 26 ತಿಂಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ತಾವು ಮಾಡಿರುವ ಕಾಮಗಾರಿಗಳ ಬಾಕಿ ಬಿಲ್ ಪಾವತಿ ಮಾಡದಿರುವ ಕುರಿತು ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯನಿರತ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಇಂದು (ಸೋಮವಾರ) ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಗುತ್ತಿಗೆದಾರರು, ''ಪಾಲಿಕೆಯ ಮುಖ್ಯ ಆಯುಕ್ತರು ಬಿಲ್ ಪಾವತಿಗೆ ಮೀನಮೇಷ ಎಣಿಸುತ್ತಿದ್ದಾರೆ. ಬಿಲ್ ಬಾಕಿ ಉಳಿಸಿಕೊಂಡು, ಈಗ ತನಿಖೆ ಆಗಬೇಕು ಅಂತಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರು ಸ್ಪಂದಿಸುತ್ತಿಲ್ಲ'' ಎಂದು ದೂರಿದರು.
''ಈಗಾಗಲೇ ಹಲವು ಗುತ್ತಿಗೆದಾರರು ದಯಾಮರಣ ಕೋರಿದ್ದಾರೆ. ಮಂಗಳೂರಿನಲ್ಲಿ ಒಬ್ಬ ಗುತ್ತಿಗೆದಾರ, ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಪಾಲಿಕೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ'' ಎಂದರು.
ಅಹವಾಲು ಆಲಿಸಿದ ಹೆಚ್.ಡಿ. ಕುಮಾರಸ್ವಾಮಿ, ''ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ. ನಿಮ್ಮ ಬಾಕಿ ಹಣ ತಡೆ ಹಿಡಿಯುವುದು ಸರಿಯಲ್ಲ. ಹಣ ಬಿಡುಗಡೆ ಮಾಡದಿದ್ದರೆ ನಿಮ್ಮ ಜೊತೆ ನಾನು ಧರಣಿ ಕೂರುತ್ತೇನೆ. ನೀವ್ಯಾರೂ ಹೆದರಬೇಕಾಗಿಲ್ಲ'' ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಗುತ್ತಿಗೆದಾರರು ನೀಡಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ದುಡಕಬೇಡಿ, ನಿಮ್ಮ ಪರ ನಾನು ನಿಲ್ಲುತ್ತೇನೆ ಎಂದು ಧೈರ್ಯ ತುಂಬಿದರು.
ಮಂಗಳೂರಿನಲ್ಲಿ ಉದ್ಯಮಿ ಆತ್ಮಹತ್ಯೆ:ಉದ್ಯಮಿಯೊಬ್ಬರು ಕಟ್ಟಡದ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಮಂಗಳೂರು ನಗರದ ಬೆಂದೂರುವೆಲ್ನ ಅಟ್ಲಾಂಟಿಕ್ ಅಪಾರ್ಟೆಂಟ್ನಲ್ಲಿ ಭಾನುವಾರ (ಆಗಸ್ಟ್ 6) ನಡೆದಿತ್ತು. ನಗರದಲ್ಲಿ ಕ್ವಾರೆ ಮತ್ತು ಬಿಲ್ಡರ್ ಉದ್ಯಮದ ವ್ಯವಹಾರ ನಡೆಸುತ್ತಿದ್ದ ಮೋಹನ್ ಅಮೀನ್ (62) ಮೃತಪಟ್ಟವರು. ಆಗಸ್ಟ್ 6ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಘಟನೆ ಜರುಗಿತ್ತು. ಮೇಲಿಂದ ಕೆಳಗೆ ಬಿದ್ದ ರಭಸಕ್ಕೆ ತಲೆ ಸಂಪೂರ್ಣ ಛಿದ್ರಗೊಂಡಿತ್ತು. ವಿಜಯವಾಹಿನಿ ಎನ್ನುವ ಹೆಸರಿನ ಟಿಪ್ಪರ್, ಕ್ವಾರೆ, ಜಲ್ಲಿಕಲ್ಲು ವ್ಯವಹಾರ ಹೊಂದಿದ್ದರು. ಮಲ್ಲಿಕಟ್ಟೆಯಲ್ಲಿ ಇವರ ಕಚೇರಿ ಇದೆ. ಡೆತ್ ನೋಟ್ ದೊರೆತಿದ್ದು, ''ನನ್ನ ಸಾವಿಗೆ ನಾನೇ ಕಾರಣ. ಪತ್ನಿ, ಮಕ್ಕಳನ್ನು ಕ್ಷಮಿಸಿ'' ಎಂದಷ್ಟೇ ಬರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಕದ್ರಿ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ.
ಇದನ್ನೂ ಓದಿ:CM Siddaramaiah: ಅಸಮಾಧಾನಕ್ಕೆ ಸಿಎಂ ಮದ್ದು; ಶಾಸಕರೊಂದಿಗೆ ಸಮನ್ವಯ ಸಾಧಿಸಲು ಉಸ್ತುವಾರಿ ಸಚಿವರುಗಳಿಗೆ ಸೂಚನೆ