ಬೆಂಗಳೂರು:ಆಸ್ತಿ ತೆರಿಗೆಯ ಜೊತೆಗೆ ಸಿಲಿಕಾನ್ ಸಿಟಿ ನಾಗರಿಕರು ಶೇ. ಎರಡರಷ್ಟು ಉಪಕರ ಕಟ್ಟಬೇಕೆಂದು ಬಿಬಿಎಂಪಿ ನಿರ್ಣಯ ತೆಗೆದುಕೊಂಡಿತ್ತು. ವಾರ್ಷಿಕ 150 ಕೋಟಿ ರೂ. ಆದಾಯದಿಂದ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು ಎಂದು ನಿನ್ನೆ ಮೇಯರ್ ಹೇಳಿದ್ದರು. ಆದರೆ ಪಾಲಿಕೆ ಇಂದು ಈ ನಿರ್ಣಯವನ್ನು ಹಿಂದಕ್ಕೆ ತೆಗೆದುಕೊಂಡಿದ್ದು, ನಗರದ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಇಂದಿನ ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ, ವಿಪಕ್ಷದ ಸದಸ್ಯರು ಪೌರ ಸಭಾಂಗಣದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಬೆಂಗಳೂರು ಜನರಿಗೆ ಹೊರೆಯಾಗಬಾರದು. ಭೂಸಾರಿಗೆ ಉಪಕರ ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಅಲ್ಲದೆ ಮೇಯರ್ ಸ್ಪಷ್ಟನೆ ಕೊಡಬೇಕು ಎಂದು ಒತ್ತಾಯಿಸಿದರು.
ಕೊನೆಗೂ ಈ ಕುರಿತು ಮೇಯರ್ ಗೌತಮ್ ಕುಮಾರ್ ಸ್ಪಷ್ಟನೆ ನೀಡಿ, ಭೂ ಸಾರಿಗೆ ಉಪಕರ ಜಾರಿ ಮುಂದೂಡಲಾಗಿದೆ ಎಂದರು. ಬಳಿಕ ಪ್ರತಿಭಟನೆ ಕೈಬಿಟ್ಟ ಕಾಂಗ್ರೆಸ್ ಪಾಲಿಕೆ ಸದಸ್ಯರು, ಕೌನ್ಸಿಲ್ ಸಭೆ ಮುಂದುವರಿಯಲು ಅನುವು ಮಾಡಿದರು.
ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಗದ್ದಲ ಬಳಿಕ ಮಾತನಾಡಿದ ಮೇಯರ್ ಗೌತಮ್ ಕುಮಾರ್, ನಿನ್ನೆ ಮಾಧ್ಯಮಗಳ ಮುಂದೆ ಬಾಯಿತಪ್ಪಿ ಹೇಳಿದ್ದು, ಅದನ್ನು ಸರಿಪಡಿಸುತ್ತಿದ್ದೇನೆ ಎಂದರು. ಭೂ ಸಾರಿಗೆ ಉಪಕರ ವಿಚಾರ ಮುಂದೂಡಲ್ಪಟ್ಟಿದೆ. ಈ ವಿಚಾರಕ್ಕೆ ಮೊದಲಿಂದಲೂ ವಿರೋಧವೂ ಇತ್ತು ಎಂದರು. ಆದರೆ ಸಿಎಜಿ ವರದಿಯಿಂದ ತೆರಿಗೆ ವಸೂಲಿ ಮಾಡಿ ಬಳಸಿಕೊಳ್ಳುವ ಬಗ್ಗೆ, ಆಡಳಿತ ಪಕ್ಷದ ನಾಯಕರು ಉಲ್ಲೇಖ ಮಾಡಿದ್ರು. ಹೀಗಾಗಿ ಈ ವಿಚಾರ ಮುನ್ನಲೆಗೆ ಬಂದಿದೆ. ಆದರೆ ಪಾಲಿಕೆ ಸದಸ್ಯರಿಂದಲೇ ವಿರೋಧ ಇರೋದ್ರಿಂದ ಮುಂದೂಡಲ್ಪಟ್ಟಿದೆ ಎಂದರು.
ಇನ್ನು ಬಿಬಿಎಂಪಿ ವಿಪಕ್ಷ ನಾಯಕ ವಾಜಿದ್ ಮಾತನಾಡಿ, ಬಿಬಿಎಂಪಿ ಆಡಳಿತಕ್ಕೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು, ಬಿಡಬೇಕು ಎಂಬುದು ಇನ್ನೂ ಗೊತ್ತಿಲ್ಲ. ಆಡಳಿತ ಒಂದು ಕಡೆ, ಮೇಯರ್ ಹಾಗೂ ಕಮೀಷನರ್ ಒಂದೊಂದು ಕಡೆ ಇದ್ದಾರೆ. ನಿನ್ನೆ ಟ್ಯಾಕ್ಸ್ ಹಾಕುತ್ತೇವೆ ಎಂದ ಮೇಯರ್ ಗೌತಮ್ ಕುಮಾರ್, ಇವತ್ತು ಈ ರೀತಿ ಹೇಳುತ್ತಿದ್ದಾರೆ. ಟ್ಯಾಕ್ಸ್ ರದ್ದು ಮಾಡಿರುವುದನ್ನು ಸ್ವಾಗತಿಸುತ್ತೇವೆ ಎಂದರು.