ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ನೀರಿನ ಅಭಾವ: ಜಲಮಂಡಳಿ ಅಧ್ಯಕ್ಷರಿಗೆ ಮೂರೂ ಪಕ್ಷಗಳ ಸದಸ್ಯರಿಂದ ತರಾಟೆ - ಬೆಂಗಳೂರು ಜಲ ಮಂಡಳಿ ಅಧ್ಯಕ್ಷ

ನೀರಿನ ವಿಚಾರದ ಚರ್ಚೆಗಾಗಿಯೇ ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಜೊತೆ ನಡೆದ ವಿಶೇಷ ಸಭೆಯಲ್ಲಿ ಪಾಲಿಕೆ ಸದಸ್ಯರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

bbmp council meeting about water problem
ಬಿಬಿಎಂಪಿ ಸಭೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚೆ

By

Published : Mar 7, 2020, 10:19 PM IST

ಬೆಂಗಳೂರು:ಬೇಸಿಗೆ ಕಾಲ ಆರಂಭವಾಗಿದ್ದು, ಬೋರ್​​ವೆಲ್​​​ಗಳಲ್ಲಿ ನೀರು ನಿಂತು ಹೋಗಿದೆ. ಕಾವೇರಿ ನೀರು ಪೂರೈಕೆ ಆಗ್ತಿಲ್ಲ. ಕುಡಿಯಲು ನೀರೇ ಇಲ್ಲ. ಜಲಮಂಡಳಿ ಅಧಿಕಾರಿಗಳಿಂದಲೂ ಸ್ಪಂದನೆ ಇಲ್ಲ. ಹೀಗೆ ಸಾಲು ಸಾಲು ನೀರಿನ ಸಮಸ್ಯೆಗಳ ಬಗ್ಗೆ 198 ಪಾಲಿಕೆ ಸದಸ್ಯರೂ ಇಂದು ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ್ದಾರೆ.

ಬಿಬಿಎಂಪಿ ನೀರಿನ ವಿಚಾರದ ಚರ್ಚೆಗಾಗಿಯೇ ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಜೊತೆ ವಿಶೇಷ ಸಭೆ ಏರ್ಪಡಿಸಲಾಗಿತ್ತು. ನಗರದಲ್ಲಿ ನೀರಿನ ಹಾಹಾಕಾರ ಪ್ರಾರಂಭವಾಗಿದೆ. ಜನ ನೀರಿಗಾಗಿ ಪರದಾಡುತ್ತಿದ್ದು, ತಮ್ಮ ತಮ್ಮ ಕಾರ್ಪೋರೇಟರ್​ಗಳಿಗೆ ದೂರು ನೀಡುತ್ತಿದ್ದಾರೆ. ಹೀಗಾಗಿ ಇಂದು ವಿಶೇಷ ಸಭೆಯಲ್ಲಿ ಮೂರು ಪಕ್ಷಗಳ ಸದಸ್ಯರು, ಜಲಮಂಡಳಿ ಅಧ್ಯಕ್ಷರ ವಿರುದ್ಧ ಮುಗಿಬಿದ್ದರು.

ಬಿಬಿಎಂಪಿ ಸಭೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚೆ

ಸಭೆಯಲ್ಲಿ ಮಾತನಾಡಿದ ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ರಾಜಧಾನಿ ಬೆಂಗಳೂರಿಗೆ ನೀರಿನ ಅಭಾವ ಇಲ್ಲ. ಕೆಲವೇ ಕೆಲವು ವಾರ್ಡ್​ಗಳಿಗೆ ನೀರಿನ ಅಭಾವ ಇದೆ. ನಮ್ಮ ಅಧಿಕಾರಿಗಳಿಗೆ ಹೇಳುತ್ತೇವೆ. ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತದೆ. 110 ಹೊಸ ಹಳ್ಳಿಗಳಿಗೂ ಪೈಪ್ ಲೈನ್ ಅಳವಡಿಕೆ ಶೇ. 99ರಷ್ಟು ಮುಗಿದಿದೆ ಎಂದರು.

ಜಲಮಂಡಳಿಯಿಂದ ಪದೇ ಪದೇ ರಸ್ತೆ ಅಗೆಯುವುದು, ನೀರಿನ ಸಂಪರ್ಕ ನೀಡದೇ ಇರುವ ಬಗ್ಗೆ ಪಾಲಿಕೆ ಸದಸ್ಯರು ತರಾಟೆಗೆ ತೆಗೆದುಕೊಂಡರು. ಆದ್ರೆ 40-60 ವಿಸ್ತೀರ್ಣದ ಮನೆಗಳಿಗೆ ಸ್ವಾಧೀನಾನುಭವ ಪತ್ರ ಇಲ್ಲದೆಯೂ ನೀರಿನ ಸಂಪರ್ಕ ನೀಡುವ ಕಾನೂನು ತಂದರೆ ಸಂಪರ್ಕ ಕೊಡಲಾಗುವುದು. ಇಲ್ಲದಿದ್ದರೆ ಪಾಲಿಕೆ ಹಾಗೂ ಜಲಮಂಡಳಿ ಎರಡಕ್ಕೂ ಕಪ್ಪು ಚುಕ್ಕೆ ಬರಲಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ಜಲಮಂಡಳಿ, ಎನ್​ಜಿಟಿ ಆದೇಶದಂತೆ ಐದು ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ ನಿರ್ಮಾಣ ಮಾಡುತ್ತಿದ್ದು, ರಾಜಾಕಾಲುವೆಗಳಿಗೆ ಚರಂಡಿ ನೀರು ಹರಿಯದಂತೆ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಶುದ್ಧೀಕರಿಸಿದ ನೀರನ್ನು ಕೆರೆಗಳಿಗೆ ತುಂಬಲಾಗುವುದು ಎಂದರು. ಅಲ್ಲದೆ ಪೋಲಾಗುತ್ತಿರುವ ಕಾವೇರಿ ನೀರಿನ ಪ್ರಮಾಣವನ್ನು ಶೇ. 49ರಿಂದ 32ಕ್ಕೆ ಇಳಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ ಹತ್ತು ಕೋಟಿ ರೂಪಾಯಿ ಪ್ಯಾಕೇಜ್​ಗೆ ಅನುಮೋದನೆ ನೀಡುವ ಅಧಿಕಾರ ಆಯುಕ್ತರು ಕೇಳಿದ್ದು, ಈ ವಿಚಾರ ಕೌನ್ಸಿಲ್​ನಲ್ಲಿ ಚರ್ಚೆಗೆ ಮುಂದೂಡಿಕೆಯಾಗಿದೆ. ಕಡತಗಳನ್ನು ತ್ವರಿತವಾಗಿ ಚಲಾವಣೆ ಮಾಡಿ, ಕಾಮಗಾರಿಗಳ ಅನುಷ್ಠಾನಕ್ಕೆ ನೆರವಾಗಲಿದೆ ಎಂದು ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.

ABOUT THE AUTHOR

...view details