ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆಯ ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ ಪರಿಶೀಲನೆ ನಡೆಸಿರುವ ಜಂಕ್ಷನ್‌ಗಳಲ್ಲಿ ತೆಗೆದುಕೊಳ್ಳಬೇಕಿರುವ ತುರ್ತು ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ರಾಕೇಶ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಜೊತೆ ನಡೆದ 3ನೇ ಸಮನ್ವಯ ಸಭೆ ಉದ್ದೇಶಿಸಿ ಮಾತನಾಡಿದ ರಾಕೇಶ್ ಸಿಂಗ್, ನಗರದಲ್ಲಿ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ತಾತ್ಕಾಲಿಕ ಪರಿಹಾರಗಳ ಜೊತೆಗೆ ಶಾಶ್ವತ ಪರಿಹಾರಗಳಿಗೂ ಹೆಚ್ಚು ಆದ್ಯತೆ ನೀಡಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಗೊರೆಗುಂಟೆಪಾಳ್ಯ ಜಂಕ್ಷನ್‌ನಲ್ಲಿ ತೆಗೆದುಕೊಳ್ಳಬೇಕಿರುವ ಕ್ರಮಗಳ ಪೈಕಿ ಈಗಾಗಲೇ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ತಾಜ್ ಹೋಟೆಲ್ ಪಕ್ಕದಲ್ಲಿ ಎಡ ತಿರುವು ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು. ಜೊತೆಗೆ ಗೊರಗುಂಟೆ ಪಾಳ್ಯದ ಹೊರ ವರ್ತುಲ ರಸ್ತೆಗೆ 990 ಮೀ. ಸಮನಾಂತರ ರಸ್ತೆಗೆ ಡಾಂಬರೀಕರಣವನ್ನು ತಕ್ಷಣವೇ ತೆಗೆದುಕೊಳ್ಳಬೇಕು. ಶೌಚಾಲಯಕ್ಕಾಗಿ ಜಲಮಂಡಳಿ ವತಿಯಿಂದ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು 10 ದಿನಗಳಲ್ಲಿ ಪೂರ್ಣಗೊಳಿಸಬೇಕು. ಬಿಡಿಎ ವತಿಯಿಂದ ಅಳವಡಿಸಬೇಕಿರುವ ಸೈನೇಜ್ ವಿನ್ಯಾಸ ಮುಗಿಯುವ ಹಂತಕ್ಕೆ ಬಂದಿದ್ದು, ವಾರದೊಳಗಾಗಿ ಅಳವಡಿಸಬೇಕು. ಪಾದಚಾರಿ ಮೇಲುಸೇತುವೆಯ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದರು.
ಗೊರಗುಂಟೆ ಪಾಳ್ಯ ಮೇಲುಸೇತುವೆ- ರೈಲ್ವೇ ಇಲಾಖೆಯ ವರದಿ ಬಾಕಿ:ಗೊರಗುಂಟೆ ಪಾಳ್ಯ ಕಡೆಯಿಂದ ಹೆಬ್ಬಾಳದ ಮಾರ್ಗದ ರೈಲ್ವೇ ಮೇಲುಸೇತುವೆಯನ್ನು ರೈಲ್ವೆ ಇಲಾಖೆಯಿಂದಲೇ ನಿರ್ಮಾಣ ಮಾಡಲಾಗಿದ್ದು, ಪಾಲಿಕೆಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಈ ಮೇಲ್ಸೇತುವೆಯಲ್ಲಿ ರಚನಾತ್ಮಕ ಸಮಸ್ಯೆಯಿದ್ದು, ಅದನ್ನು ರೈಲ್ವೆ ಇಲಾಖೆಯು ಪರಿಶೀಲಿಸಿ ಪಾಲಿಕೆಗೆ ವರದಿ ನೀಡಲಿದೆ. ಆ ಬಳಿಕ ಅದಕ್ಕೆ ತಗಲುವ ವೆಚ್ಚವನ್ನು ಪಾಲಿಕೆಯಿಂದ ರೈಲ್ವೆ ಇಲಾಖೆಗೆ ನೀಡಲಿದ್ದು, ರೈಲ್ವೆ ಇಲಾಖೆಯಿಂದಲೇ ದುರಸ್ತಿ ಕಾರ್ಯ ನಡೆಸಲಾಗುತ್ತದೆ ಎಂದರು.
ಹೆಬ್ಬಾಳ ಜಂಕ್ಷನ್‌ನಲ್ಲಿ ರೈಲ್ವೇ ಹಳಿ ಕೆಳಸೇತುವೆ:ಹೆಬ್ಬಾಳ ಜಂಕ್ಷನ್‌ನಲ್ಲಿ ರೈಲ್ವೇ ಹಳಿ ಕೆಳಸೇತುವೆ ಯೋಜನೆ ಕೈಗೆತ್ತಿಕೊಳ್ಳುವ ಯೋಜನೆಯ ಬಗ್ಗೆ ಚರ್ಚಿಸಲಾಯಿತು. ಜೊತೆಗೆ ತಾತ್ಕಾಲಿಕವಾಗಿ ಲೆವೆಲ್ ಕ್ರಾಸಿಂಗ್ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಬಸ್ ನಿಲ್ದಾಣದ ಪ್ರವೇಶ ಮಾರ್ಗ:ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಬಿಎಂಟಿಸಿ ಬಸ್ ನಿಲ್ದಾಣದ ಪ್ರವೇಶ ಮಾರ್ಗವನ್ನು ಅಂತಿಮಗೊಳಿಸಿ ಅದರಂತೆ ಬಸ್ಗಳು ಬರುಲು ಅನುಮತಿ ನೀಡಬೇಕು. ಅಲ್ಲದೆ ಬಸ್ ನಿಲ್ದಾಣದ ಸ್ಥಳದಲ್ಲಿ ದೀಪಗಳು ಮತ್ತು ಶೌಚಾಲಯಗಳನ್ನು ಸ್ಥಾಪಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.