ಬೆಂಗಳೂರು:ಬಿಬಿಎಂಪಿ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಾಯಗೊಂಡವರು ಗುಣಮುಖರಾಗುತ್ತಿದ್ದಾರೆ. ಜ್ಯೋತಿ ಹಾಗೂ ಮುಖ್ಯ ಅಭಿಯಂತರರಾದ ಶಿವಕುಮಾರ್ ತೀವ್ರವಾಗಿ ಗಾಯಗೊಂಡಿರುವುದರಿಂದ ಮತ್ತು ವಿಷಾನಿಲ ಸೇವಿಸಿರುವುದರಿಂದ ಮತ್ತಷ್ಟು ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಇಂದು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ಧ್ವಜಾರೋಹಣವನ್ನು ನೆರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 'ನಗರದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ತಿಳಿಸುತ್ತೇನೆ. ಸ್ವಾತಂತ್ರ್ಯ ಬಂದು ದೇಶ 77ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಸ್ವಾತಂತ್ರ್ಯಕ್ಕಾಗಿ ಬಹಳಷ್ಟು ಬಲಿದಾನಗಳು ನಡೆದಿವೆ. ಇಂದಿಗೂ ಗಡಿಯಲ್ಲಿ ಬಹಳಷ್ಟು ಯೋಧರು ನಮ್ಮನ್ನು ಕಾಯುತ್ತಿದ್ದಾರೆ. ಅವರೆಲ್ಲರಿಗೆ ಗೌರವ ಸಲ್ಲಿಸುವ ದಿನ ಇದಾಗಿದೆ' ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಚೀಫ್ ಇಂಜಿನಿಯರ್ ಪ್ರಹ್ಲಾದ್, ಬಿಬಿಎಂಪಿಯಲ್ಲಿ ಬೆಂಕಿ ಅವಘಡದ ಬಗ್ಗೆ ಆಂತರಿಕ ತನಿಖೆ ಪ್ರಾರಂಭವಾಗಬೇಕಿದೆ. ಪೊಲೀಸರು ಇನ್ನೂ ಬೆಂಕಿ ಬಿದ್ದ ಲ್ಯಾಬ್ ಕೊಠಡಿಯ ಬೀಗವನ್ನು ನೀಡಿಲ್ಲ. ನಾಳೆ ಸಂಜೆ ಒಳಗಾಗಿ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಗುರುವಾರ ಅಂತರಿಕ ತನಿಖೆ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಇಬ್ಬರ ಸ್ಥಿತಿ ಗಂಭೀರ:ತನಿಖೆ ಪೂರ್ಣಗೊಳಿಸಿ ಆಗಸ್ಟ್ ತಿಂಗಳ 30ರ ಒಳಗೆ ಆಯುಕ್ತರಿಗೆ ವರದಿ ಕೊಡುತ್ತೇವೆ. ಪೊಲೀಸರು ನನಗೆ ನೋಟಿಸ್ ಕೊಟ್ಟಿಲ್ಲ. ಘಟನೆಯ ಬಗ್ಗೆ ವಿವರಣೆ ಕೇಳಿದ್ದಾರೆ ಅಷ್ಟೇ. ಅವರಿಗೆ ವಿವರಣೆ ಕೊಟ್ಟಿದೇನೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು. ಆಸ್ಪತ್ರೆಯಲ್ಲಿರುವ 9 ಜನರಲ್ಲಿ 5 ಮಂದಿ ಅರೋಗ್ಯವಾಗಿದ್ದಾರೆ. ಉಳಿದ ನಾಲ್ವರ ಚೇತರಿಕೆ ಆಗುತ್ತಿದೆ. ಸದ್ಯ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪ್ರಹ್ಲಾದ್ ತಿಳಿಸಿದರು.
ಪಾಲಿಗೆಯ ಕೇಂದ್ರ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯೋತ್ಸವ: ಈ ಮೊದಲು 77ನೇ ಸ್ವತಂತ್ರ ದಿನಾಚರಣೆ ಹಿನ್ನೆಲೆ ಪಾಲಿಗೆ ಕೇಂದ್ರ ಕಚೇರಿಯಲ್ಲಿ ಅಡಳಿತಧಿಕಾರಿ ರಾಕೇಶ್ ಸಿಂಗ್ ಅವರಿಂದ ಧ್ವಜಾರೋಹಣ ನೆರವೇರಿತು. ಧ್ವಜಾರೋಹಣದ ಕಾರ್ಯಕ್ರಮದಲ್ಲಿ ಪಾಲಿಕೆ ಅಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರು, ಬಿಬಿಎಂಪಿಯ ನೌಕರರು ಭಾಗಿಯಾಗಿದ್ದರು. ನೂರಾರು ಶಾಲ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು