ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ರಮೇಣ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದೆ. ಈ ಸಂಬಂಧ ಕೋವಿಡ್ ಸೋಂಕು ದೃಢಪಟ್ಟವರಿಗೆ ನಾಳೆಯಿಂದಲೇ ಸೀಲ್ ಹಾಕುವ ಕಾರ್ಯವನ್ನು ಪ್ರಾರಂಭಿಸಬೇಕು. ಈ ಬಗ್ಗೆ ಎಲ್ಲಾ ವಲಯಗಳಲ್ಲಿಯೂ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ 8 ವಲಯ ಮಟ್ಟದಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಇಂದು ವರ್ಚುಯಲ್ ಮೂಲಕ ನಡೆದ ಸಭೆಯಲ್ಲಿ ಮುಖ್ಯ ಆಯುಕ್ತ ಮಾತನಾಡಿ, ನಗರದಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲಾ ವಲಯಗಳಲ್ಲಿಯೂ ಸೂಕ್ತ ಕ್ರಮ ಕೈಗೊಳ್ಳಬೇಕು. ಕೋವಿಡ್ ಸೋಂಕು ದೃಢಪಟ್ಟವರಿಗೆ ಸೀಲ್ ಹಾಕಬೇಕು. ಅದಕ್ಕೆ ಬೇಕಾದ ಇಂಕ್ ಅನ್ನ ಎಲ್ಲಾ ವಲಯಗಳಿಗೂ ಕೂಡಲೇ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಮುಖ್ಯ ಆರೋಗ್ಯಾಧಿಕಾರಿಗೆ ಮುಖ್ಯ ಆಯುಕ್ತ ಸೂಚನೆ ನೀಡಿದರು.
ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಡಬೇಕಿರುವ ಹಾಸಿಗೆ ಸಾಮರ್ಥ್ಯವನ್ನು ಇನ್ನೂ ಹೆಚ್ಚಳವಾಗುವಂತೆ ಕ್ರಮವಹಿಸಬೇಕು. ಬೂತ್ ಮಟ್ಟದ ತಂಡಗಳ ಕಾರ್ಯನಿರ್ವಹಣೆಯನ್ನು ಸಕ್ರಿಯವಾಗಿಸಿ ಕಾಂಟ್ಯಾಕ್ಟ್ ಟ್ರೇಸಿಂಗ್ ಸರಿಯಾಗಿ ಮಾಡಬೇಕು. ಎಲ್ಲಾ ವಲಯಗಳಲ್ಲಿಯೂ ಕಂಟೈನ್ಮೆಂಟ್ ಜೋನ್ ಒಂದೇ ಮಾದರಿಲ್ಲಿರಬೇಕು. ಆಂಬ್ಯುಲೆನ್ಸ್ಗಳ ವ್ಯವಸ್ಥೆ, ಟೆಸ್ಟಿಂಗ್ ಹಾಗೂ ವ್ಯಾಕ್ಸಿನೇಷನ್ ಹೆಚ್ಚಳ ಮಾಡಲು ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.