ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸಂಬಂಧಿತ ಮತ್ತು ಇತರೆ ಅನಧಿಕೃತ ಜಾಹೀರಾತು ಫಲಕ/ಫ್ಲಕ್ಸ್ ತೆರವಿಗೆ ಆಂತರಿಕ ಸುತ್ತೋಲೆ ಹೊರಡಿಸಿದೆ.
ಹೈಕೋರ್ಟ್ನ ಅದೇಶ ಇದ್ದರು ಸಹ ಅದನ್ನೆಲ್ಲ ಗಾಳಿಗೆ ತೂರಿ ಕೋವಿಡ್ ಜಾಗೃತಿ ಹೆಸರಿನಲ್ಲಿ ವಾಣಿಜ್ಯ ಸಂಸ್ಥೆಗಳು ,ಆರೋಗ್ಯ ಇಲಾಖೆಯು ಒಳಗೊಂಡಂತೆ (ಲಾಕ್ಡೌನ್ ವೇಳೆ ಹೊರತು ಪಡಿಸಿ) ಅನಧಿಕೃತ ಜಾಹಿರಾತು ಅಳವಡಿಸಿವೆ.
ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರು ಈ ಬಗ್ಗೆ ಅಂತಿಮ ಸುತ್ತೋಲೆ ಹೊರಡಿಸಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಅನಧಿಕೃತ ಜಾಹೀರಾತು ಫಲಕಗಳ ಮಾಹಿತಿ ಸಂಗ್ರಹಿಸಿ ತಕ್ಷಣ ತೆರವುಗೊಳಿಸಬೇಕು. ಇಲ್ಲದಿದ್ದರೇ ಆ ವಲಯದ ಜಂಟಿ ಆಯುಕ್ತರು ಮತ್ತು ಇಂಜಿನಿಯರ್ ವಿರುದ್ಧ ಶಿಸ್ತು ಕ್ರಮ ಕೈಯ್ಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೈಕೋರ್ಟ್ ಬಿಸಿ ಮುಟ್ಟಿಸಿರುವ ಹಿನ್ನೆಲೆಯಲ್ಲಿ ಈ ತಿಂಗಳ 23ರ ಒಳಗೆ ಕೋವಿಡ್ ಜಾಗೃತಿ ಮೂಡಿಸುವ ನೆಪದಲ್ಲಿ ಇರುವ ಮತ್ತು ವಾಣಿಜ್ಯ ಜಾಹೀರಾತು, ಕಬ್ಬಿಣದ ಸ್ಟ್ರಕ್ಷರ್ ಫಲಕಗಳನ್ನೊಳಗೊಂಡು ಮಾಹಿತಿ ಸಂಗ್ರಹಿಸಿ ತೆರವುಗೊಳಿಸಬೇಕಿದೆ. ಇಲ್ಲದಿದ್ದರೆ ಅಧಿಕಾರಿಗಳು ವೈಯಕ್ತಿಕವಾಗಿ ಜವಾಬ್ದಾರರನ್ನಾಗಿ ಮಾಡುವುದರ ಜೊತೆಗೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನಗರ ಆಯುಕ್ತರು ಖಡಕ್ ಸಂದೇಶ ರವಾನಿಸಿದ್ದಾರೆ.