ಬೆಂಗಳೂರು: ನಗರದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುವಾಗುವಂತೆ ಪಾಲಿಕೆಯ 63 ಉಪ ವಿಭಾಗ ಕಚೇರಿಗಳಲ್ಲಿ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಹಾಗೂ ಪಾಲಿಕೆ ವತಿಯಿಂದ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಜೊತೆ ನಡೆದ ಜಂಟಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಪಾಲಿಕೆ ವತಿಯಿಂದ ಗಣೇಶ ನಿಮಜ್ಜನಕ್ಕೆ ನಗರದ ಕೇಂದ್ರ ಭಾಗದಲ್ಲಿರುವ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಹಾಗೂ ಇತರ ಪ್ರಮುಖ ಕೆರೆ ಅಥವಾ ಕಲ್ಯಾಣಿಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ನಿರ್ದೇಶನ ನೀಡಿದರು.
ಕೆಲ ಪ್ರದೇಶಗಳಲ್ಲಿ ಕೆರೆಗಳು ವಸತಿ ಪ್ರದೇಶದಿಂದ ದೂರವಿರುವುದರಿಂದ ಸಾರ್ವಜನಿಕರು ಚಿಕ್ಕ-ಚಿಕ್ಕ ಮೂರ್ತಿಗಳನ್ನು ನಿಮಜ್ಜನ ಮಾಡುವ ಸಲುವಾಗಿ ಪ್ರತಿ ವಲಯಗಳ ಪ್ರಮುಖ ಸ್ಥಳ ಅಥವಾ ಜಂಕ್ಷನ್ ಮತ್ತು ಅವಶ್ಯಕತೆ ಇರುವ ಕಡೆ ವಾರ್ಡ್ವಾರು ತಾತ್ಕಾಲಿಕ ಸಂಚಾರಿ ನಿಮಜ್ಜನಾ ಘಟಕ (ಮೊಬೈಲ್ ಟ್ಯಾಂಕ್) ಗಳನ್ನು ಪ್ರತಿ ವರ್ಷದಂತೆ ವ್ಯವಸ್ಥೆ ಮಾಡಲು ಹೇಳಿದರು. ಗಣೇಶ ಮೂರ್ತಿಗಳ ನಿಮಜ್ಜನಕ್ಕೆ ಗುರುತಿಸಿರುವ ಕೆರೆಗಳ ಸುತ್ತಮುತ್ತ ಹಾಗೂ ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾಗಿ ಬ್ಯಾರಿಕೇಡಿಂಗ್ ಅಳವಡಿಸಬೇಕು. ಎಲ್ಲ ನಿಮಜ್ಜನ ಕೇಂದ್ರಗಳಲ್ಲೂ ಪಾಳಿಯನುಸಾರ ನುರಿತ ಈಜುಗಾರರನ್ನು ಮತ್ತು ಅಗತ್ಯ ಸಿಬ್ಬಂದಿ ನೇಮಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಆಯಾ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸುವ ಸಲುವಾಗಿ ಸಿಸಿಟಿವಿ, ವಿದ್ಯುತ್ ದ್ವೀಪಗಳ ಸೌಲಭ್ಯಗಳನ್ನು ತಪ್ಪದೇ ಅಳವಡಿಸಲು ಸೂಚಿಸಿದರು.
ನಿಮಜ್ಜನಾ ಕೇಂದ್ರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು(ಪೂಜಾ ಸಾಮಗ್ರಿಗಳಾದ ಹೂವು, ಬಾಳೆಯ ಕಂದು, ತಳಿರು ತೋರಣ, ಮತ್ತಿತರ ತ್ಯಾಜ್ಯ ವಸ್ತುಗಳನ್ನು) ಸಂಗ್ರಹಿಸಿ ನಿಗದಿತ ಕಂಟೈನರ್ಗಳ ಮೂಲಕ ತಕ್ಷಣವೇ ತೆರವುಗೊಳಿಸಲು ಅಗತ್ಯ ಸ್ವಚ್ಛತಾ ಸಿಬ್ಬಂದಿ ಹಾಗೂ ಸಾಗಣೆ ವಾಹನಗಳನ್ನು ಸಜ್ಜುಗೊಳಿಸಲು ತಿಳಿಸಿದರು. ಗಣೇಶ್ ಮೂರ್ತಿಗಳ ನಿಮಜ್ಜನಕ್ಕೆ ಅನುಕೂಲವಾಗುವಂತೆ ಅಗತ್ಯವಿದ್ದಲ್ಲಿ ದೋಣಿಗಳ ವ್ಯವಸ್ಥೆ, ನೀರೆತ್ತುವ ಪಂಪ್ಗಳ ವ್ಯವಸ್ಥೆ, ಕ್ರೇನ್ಗಳ ವ್ಯವಸ್ಥೆಗಳನ್ನು ಕೂಡ ಮಾಡಬೇಕು. ಜೊತೆಗೆ ಪೊಲೀಸ್ ಬಂದೋಬಸ್ತ್ ಮೂಲಕ ಸೂಕ್ತ ಏರ್ಪಾಡುಗಳನ್ನು ಮಾಡಿಕೊಳ್ಳಬೇಕು. ನಿಮಜ್ಜನಾ ಮೆರವಣಿಗೆ ವೇಳೆ ಪಟಾಕಿ, ಸಿಡಿ ಮದ್ದು ಸಿಡಿಸುವುದು ಹಾಗೂ ನಾಗರಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.