ಬೆಂಗಳೂರು: ನಗರದಲ್ಲಿ ಕೋವಿಡ್ ಪರಿಸ್ಥಿತಿ ಬಿಗಡಾಯಿಸುತ್ತಿದೆ. ವ್ಯವಸ್ಥೆಯ ಮೇಲ್ವಿಚಾರಣೆ ನಡೆಸುತ್ತಿರುವ ಬಿಬಿಎಂಪಿಗೆ ಅನೇಕ ಸವಾಲುಗಳು ಎದುರಾಗುತ್ತಿವೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ದಿನೇ ದಿನೇ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಬಿಬಿಎಂಪಿ ಕಡೆಯಿಂದ 10 ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಿದ್ದೇವೆ. 1,505 ಬೆಡ್ಗಳು ಲಭ್ಯವಿರಲಿವೆ ಎಂದು ಹೇಳಿದರು.
ಈಗಾಗಲೇ 800 ಬೆಡ್ಗಳು ಎರಡು ಕೋವಿಡ್ ಕೇರ್ ಸೆಂಟರ್ಗಳಲ್ಲಿ ವರ್ಕಿಂಗ್ನಲ್ಲಿವೆ. ಇದಲ್ಲದೆ ಹೊಸದಾಗಿ ತೆರೆಯಲಿರುವ 10 ಕೋವಿಡ್ ಕೇರ್ ಸೆಂಟರ್ನಲ್ಲಿ 1,505 ಬೆಡ್‌ಗಳ ಸೇರ್ಪಡೆ ಆಗಲಿದೆ. ಇದಲ್ಲದೆ ಪ್ರೈವೆಟ್ ಆಸ್ಪತ್ರೆಗಳು ಹಾಗೂ ಖಾಸಗಿ ಹೋಟೆಲ್‌ಗಳು ಸೇರಿ ನಾಲ್ಕು ಕಡೆ, 400 ಹಾಸಿಗೆಗಳ ಖಾಸಗಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಿದ್ದಾರೆ. ನಿನ್ನೆ ಮುಖ್ಯ ಮಂತ್ರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ವಿವರಣೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ಹಾಸಿಗೆಗಳ ಅಭಾವ:
ನಗರದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆಗಳ ಅಭಾವದ ಕುರಿತು ಪ್ರತಿಕ್ರಿಯಿಸುತ್ತಾ, 5,000 ಬೆಡ್ಗಳನ್ನು ಖಾಸಗಿ ಆಸ್ಪತ್ರೆಗಳಿಂದ ಪಡೆಯಲು ನೋಟಿಸ್ ಜಾರಿ ಮಾಡಲಾಗಿದೆ. ಈಗಾಗಲೇ 2,500 ಬೆಡ್ ಖಾಸಗಿ ಆಸ್ಪತ್ರೆಯಿಂದ ಪಡೆದಿದ್ದೇವೆ. ದಾಖಲಾಗಿರುವ ರೋಗಿಗಳು ಡಿಸ್ಚಾರ್ಜ್ ಆದ ಬಳಿಕ ಬೆಡ್ಗಳು ಖಾಲಿಯಾಗಲಿದೆ. ಆಪ್ತಮಿತ್ರ ಹೆಲ್ಪ್ಲೈನ್ 14410 ಸಂಪರ್ಕ ಮಾಡಿ ಸಲಹೆ ಪಡೆಯಬಹುದು ಎಂದು ತಿಳಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ ಲಾಕ್ಡೌನ್ ಇಲ್ಲ; ಏ.18 ರಂದು ಸರ್ವಪಕ್ಷ ಸಭೆ ಬಳಿಕ ಮುಂದಿನ ನಿರ್ಧಾರ: ಸಿಎಂ
ಸಾವಿನ ಪ್ರಮಾಣದಲ್ಲಿ ಏರಿಕೆ:
ನಗರದಲ್ಲಿ ಡೆತ್ ರೇಟ್ 0.5% ಇದೆ. ಸೋಂಕಿತರು ಹೆಚ್ಚಳವಾದ ಕಾರಣ, ಸಾವಿನ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ. ಈ ಸಂಖ್ಯೆ ಮತ್ತಷ್ಟು ಕಡಿಮೆಯಾಗಬೇಕಿದೆ. ಐಸಿಯು ಹಾಗೂ ಐಸಿಯು ವೆಂಟಿಲೇಟರ್ ಬೆಡ್ಗಳನ್ನು ಹೆಚ್ಚು ಮಾಡಬೇಕು. ಆ ನಿಟ್ಟಿನಲ್ಲಿ ಮೆಡಿಕಲ್ ಕಾಲೇಜುಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.