ಬೆಂಗಳೂರು: ರಾಜಧಾನಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ಗಳನ್ನು ತೆರವುಗೊಳಿಸುವ ಕೆಲಸ ಇನ್ನಷ್ಟು ವೇಗವಾಗಿ ನಡೆಯಬೇಕಿದ್ದು, ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ಮತ್ತು ಬ್ಯಾನರ್ಗಳ ತೆರವುಗೊಳಿಸುವಿಕೆ ಬಗ್ಗೆ ನಡೆದ ವರ್ಚುಯಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್, ಫ್ಲೆಕ್ಸ್ಗಳನ್ನು ವ್ಯಾಪಕವಾಗಿ ಅಳವಡಿಸಲಾಗುತ್ತಿದೆ. ಆಯಾ ವಲಯ ವ್ಯಾಪ್ತಿಯಲ್ಲಿನ ಸ್ಥಳೀಯ ಅಧಿಕಾರಿಗಳು ಯಾವುದೇ ಫ್ಲೆಕ್ಸ್ಗಳನ್ನು ಅಳವಡಿಸಲು ಬಿಡಬಾರದು. ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸುವಂತಹವರ ಮೇಲೆ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎಫ್ಐಆರ್ ದಾಖಲಿಸಲು ಸೂಚನೆ ನೀಡಿದರು.
ಚುನಾವಣೆ ಸಂದರ್ಭದಲ್ಲಿ ಹೇಗೆ ನಗರವು ಬ್ಯಾನರ್, ಫ್ಲೆಕ್ಸ್ಗಳಿಂದ ಮುಕ್ತವಾಗಿರುತ್ತದೆಯೋ ಅದೇ ರೀತಿ ಈಗಲೂ ಕೂಡ ನಗರವು ಬ್ಯಾನರ್, ಫ್ಲೆಕ್ಸ್ ಗಳಿಂದ ಮುಕ್ತವಾಗಿರಬೇಕು. ನಗರದಲ್ಲಿ ಎಲ್ಲೆಲ್ಲಿ ಹೆಚ್ಚಾಗಿ ಫ್ಲೆಕ್ಸ್, ಬ್ಯಾನರ್ಗಳನ್ನು ಅಳವಡಿಸಲಾಗಿದೆಯೋ ಅಂತಹ ಸ್ಥಳಗಳಲ್ಲಿ ಪೊಲೀಸ್ ಸಹಯೋಗದ ಜೊತೆಗೆ ಮಾರ್ಷಲ್‌ಗಳನ್ನು ಸಹ ನಿಯೋಜನೆ ಮಾಡಿಕೊಂಡು ತೆರವುಗೊಳಿಸಲು ಮುಂದಾಗಬೇಕು. ಪಾಲಿಕೆಯ ಶಿಲ್ಟ್ ಅಂಡ್ ಟ್ರ್ಯಾಕ್ಟರ್ ಸೇರಿ ಹೆಚ್ಚುವರಿಯಾಗಿ ಇನ್ನಿತರ ವಾಹನಗಳು ಹಾಗೂ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ತೆರವು ಕಾರ್ಯಾಚರಣೆ ನಡೆಸಲು ಸೂಚಿಸಿದರು.
ನಗರದಲ್ಲಿ ಫ್ಲೆಕ್ಸ್, ಬ್ಯಾನರ್ಗಳು, ಬಂಟಿಗ್ಸ್, ಭಿತ್ತಿಪತ್ರ, ಬಾವುಟಗಳು ಸೇರಿದಂತೆ ಇತ್ಯಾದಿ ಜಾಹೀರಾತು/ಪ್ರಕಟಣೆಗಳ ಅಳವಡಿಕೆಯು ಬಿಬಿಎಂಪಿ ಕಾಯ್ದೆ 2020 ಮತ್ತು ಕರ್ನಾಟಕ ಮುಕ್ತ ಸ್ಥಳಗಳ(ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಕಲಂ(3)ರ ಅಡಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದರೂ ಸಹ ನಗರದಲ್ಲಿ ಮತ್ತೆ ಮತ್ತೆ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ಸ್ಗಳನ್ನು ಅಳವಡಿಸಿ ನಗರದ ಸೌಂದರ್ಯ ಆಳಾಗುವಂತಹ ಕೆಲಸ ಮಾಡಲಾಗುತ್ತಿದೆ. ಈ ಸಂಬಂಧ ಪಾಲಿಕೆಯ ಎಲ್ಲ ವಲಯಗಳಲ್ಲಿಯೂ ಅಧಿಕಾರಿಗಳು ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಂಡು ತೆರವು ಕಾರ್ಯಾಚರಣೆ ಮಾಡಿ, ಯಾವುದೇ ಅನಧಿಕೃತ ಫ್ಲೆಕ್ಸ್ ಗಳು ಇರದಂತೆ ಕ್ರಮವಹಿಸಲು ಸೂಚನೆ ನೀಡಿದರು.