ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ಗುಣಮುಖರಾಗುತ್ತಿರುವವರ ಪ್ರಮಾಣ ಕುಸಿಯುತ್ತಿದೆ. ಎಷ್ಟೇ ಬಾರಿ ಟೆಸ್ಟ್ ಮಾಡಿದರೂ ಕೆಲವು ರೋಗಿಗಳಿಗೆ ಪಾಸಿಟಿವ್ ಬರುತ್ತಿದೆ. ಆದರೆ ಆಘಾತಕಾರಿ ವಿಚಾರ ಅಂದ್ರೆ ಯಾವುದೇ ಸೋಂಕಿನ ಲಕ್ಷಣ ಇಲ್ಲದಿದ್ರೆ (ಅಸಿಮ್ಟಮ್ಯಾಟಿಕ್) ಆ ರೋಗಿಯನ್ನು 28 ದಿನದ ಬಳಿಕ ಡಿಸ್ಚಾರ್ಜ್ ಮಾಡಲು ಆಸ್ಪತ್ರೆಗಳು ಮುಂದಾಗಿವೆ ಎಂದು ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ರೋಗಿಗಳ ಸಂಖ್ಯೆ ಹೆಚ್ಚಾದ್ರೆ , ಅಸಿಮ್ಟಮ್ಯಾಟಿಕ್ ಕೋವಿಡ್ ಆಗಿದ್ದರೆ, ಮನೆಯಲ್ಲಿ ಚಿಕಿತ್ಸೆ ನೀಡುವ ಕುರಿತು ಆರೋಗ್ಯ ಇಲಾಖೆ ಚಿಂತನೆ ನಡೆಸಿತ್ತು. ಇದೀಗ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕೆಲವು ರೋಗಿಗಳಿಗೆ ಪದೇ ಪದೆ ಟೆಸ್ಟ್ ಮಾಡಿದ್ರೂ ಕೋವಿಡ್ ರಿಸಲ್ಟ್ ಪಾಸಿಟಿವ್ ಬರುತ್ತಿದ್ದ ಕಾರಣ, ಕ್ವಾರಂಟೈನ್ನಲ್ಲೇ ಇಡಲಾಗಿತ್ತು. ಈ ಬಗ್ಗೆ ಚರ್ಚೆ ನಡೆದು ಕ್ವಾರಂಟೈನ್ನಲ್ಲೇ ಇಡಬೇಕಾ ಅಥವಾ ಬಿಡುಗಡೆ ಮಾಡಬೇಕಾ ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
ಕೆಲವೊಂದು ರೋಗಿಗಳನ್ನು 28 ದಿನಗಳಾದರೂ ಡಿಸ್ಚಾರ್ಜ್ ಮಾಡಿಲ್ಲ. ಹಾಗಾಗಿ ಗುಣಮುಖರಾದವರ ಪ್ರಮಾಣ ಕಡಿಮೆ ತೋರಿಸುತ್ತಿತ್ತು. ಹೀಗಾಗಿ ವರದಿಯಲ್ಲೂ ಸಕ್ರಿಯ ಪ್ರಕರಣ ಎಂದು ತೋರಿಸುತ್ತಿದೆ. ಇಪ್ಪತ್ತೆಂಟು ದಿನದ ಬಳಿಕ ಯಾವುದೇ ಸೋಂಕಿನ ಲಕ್ಷಣ ಇಲ್ಲದಿದ್ರೆ, ಮನೆಗೆ ಕಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಇನ್ಮುಂದೆ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದರು.