ಬೆಂಗಳೂರು: ಎಲ್ಲೆಂದರಲ್ಲಿ ಆಸ್ಪತ್ರೆಯ ವೈದ್ಯಕೀಯ ಜೈವಿಕ ತ್ಯಾಜ್ಯ ಬಿಸಾಡಿ ನಿರ್ಲಕ್ಷ್ಯ ತೋರಿದ ಖಾಸಗಿ ಆಸ್ಪತ್ರೆಯಿಂದ ಬಿಬಿಎಂಪಿ 50 ಸಾವಿರ ರೂ. ದಂಡ ವಸೂಲಿ ಮಾಡಿದೆ.
ಜೈವಿಕ ತ್ಯಾಜ್ಯ ರಸ್ತೆಯಲ್ಲಿ ಬಿಸಾಡಿ ನಿರ್ಲಕ್ಷ್ಯ: ಆಸ್ಪತ್ರೆಯಿಂದ 50 ಸಾವಿರ ರೂ. ದಂಡ ವಸೂಲಿ ಮಾಡಿದ ಬಿಬಿಎಂಪಿ
ವೈದ್ಯಕೀಯ ತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿ ಬಿಸಾಡಿದ್ದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಬಿಬಿಎಂಪಿ 50 ಸಾವಿರ ರೂಪಾಯಿ ದಂಡ ವಿಧಿಸಿ, ಪೊಲೀಸ್ ಠಾಣೆಗೆ ದೂರು ಸಹ ನೀಡಿದೆ.
ಮುದ್ದಯ್ಯನಪಾಳ್ಯದಲ್ಲಿರುವ ಮಹದೇವ್ ಆಸ್ಪತ್ರೆಯು ಮಾಡಿದ ತಪ್ಪಿಗೆ ದಂಡ ಪಾವತಿಸಿದೆ. ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದರೂ ಇದನ್ನು ನಿಯಂತ್ರಿಸಿ ಜನರಿಗೆ ತಿಳುವಳಿಕೆ ಮೂಡಿಸಬೇಕಾದ ಆಸ್ಪತ್ರೆ ಸಿಬ್ಬಂದಿಯೇ, ವೈದ್ಯಕೀಯ ಜೈವಿಕ ತ್ಯಾಜ್ಯ ರಸ್ತೆಯಲ್ಲಿ ಬಿಸಾಡುವ ಮೂಲಕ ಸಾರ್ವಜನಿಕರಿಗೆ ಪರೋಕ್ಷವಾಗಿ ಕಾಯಿಲೆ ಹರಡಲು ಕಾರಣರಾಗಿದ್ದಾರೆ ಎಂದು ಬಿಬಿಎಂಪಿ ಹೆಲ್ತ್ ಇನ್‌ಸ್ಪೆಕ್ಟರ್ ಹನುಮಂತರಾಜ್ ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದಕ್ಕೂ ಮುನ್ನ ಆಸ್ಪತ್ರೆ ಸಿಬ್ಬಂದಿ ಮುದ್ದಯ್ಯನ ಪಾಳ್ಯ ಹೊಸ ರೋಡ್ನಲ್ಲಿ ಪಿಪಿಇ ಕಿಟ್ ಜೊತೆ ಸಿರಿಂಜ್ ಮತ್ತು ಮಾತ್ರೆಗಳನ್ನು ಕವರ್ನಲ್ಲಿ ಬಿಸಾಡಿದ್ದಾರೆ ಎನ್ನಲಾಗ್ತಿದೆ. ಇದನ್ನು ಕಂಡ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದರಂತೆ ಸ್ಥಳ ಪರಿಶೀಲಿಸಿ ಅಧಿಕಾರಿಗಳು 50 ಸಾವಿರ ರೂಪಾಯಿ ದಂಡ ಪಾವತಿಸುವಂತೆ ತಾಕೀತು ಮಾಡಿದ್ದರು.