ಬೆಂಗಳೂರು:ದೀಪಾವಳಿ ಹಬ್ಬದ ಹಿನ್ನೆಲೆ ಸರಣಿ ರಜೆ ಹಾಗೂ ಮಳೆ ಬಿಡುವು ನೀಡಿರುವ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಬಿಬಿಎಂಪಿ ಚುರುಕುಗೊಳಿಸಿದೆ.
ರಸ್ತೆಗುಂಡಿಗಳಿಗೆ ಸಿಲುಕಿ ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಓಕಳಿಪುರಂನ ಸುಜಾತ ಥಿಯೇಟರ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಮಹಿಳೆಯೊಬ್ಬರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ರಸ್ತೆಗಳನ್ನು ಮುಚ್ಚದ ಸರ್ಕಾರಕ್ಕೆ ಪ್ರತಿ ಪಕ್ಷಗಳು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದವು.
ನಗರದ ಎಂಟು ವಲಯಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ, ದುರಸ್ತಿ ಮಾಡುವ ಕಾರ್ಯ ಆರಂಭವಾಗಿದೆ. ಈ ವಾರದೊಳಗೆ ಬಹುತೇಕ ರಸ್ತೆ ಗುಂಡಿಗಳನ್ನು ಮುಚ್ಚುವ ಗುರಿಯನ್ನು ಪಾಲಿಕೆ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮರೋಪಾದಿಯಲ್ಲಿ ಗುಂಡಿ ಮುಚ್ಚುವ ಕೆಲಸ: ಬಿನ್ನಿಮಿಲ್ಸ್, ವಿಲ್ಸನ್ ಗಾರ್ಡನ್, ಔಟರ್ ರಿಂಗ್ ರಸ್ತೆ, ಸರ್ವೀಸ್ ರಸ್ತೆ, ದೊಡ್ಡಾನೆಕುಂದಿ, ಮಾರತ್ತಹಳ್ಳಿ, ಇಬ್ಬಲೂರು, ಇಮ್ಮಡಿಹಳ್ಳಿ ರಸ್ತೆ, ಹಗದೂರು ರಸ್ತೆ, ವೈಟ್‌ಫೀಲ್ಡ್ ರಸ್ತೆ, ಸಿದ್ದಾಪುರ ನಲ್ಲೂರಹಳ್ಳಿ ರಸ್ತೆ, ಗುಂಜೂರು ರಸ್ತೆ, ಶಾಂತಿನಗರ, ಆರ್ ಟಿ ನಗರ ಸೇರಿದಂತೆ ನಾನಾ ಕಡೆ ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ಹಬ್ಬದ ಸಂದರ್ಭದಲ್ಲೂ ಕಾರ್ಯನಿರ್ವಹಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ನಗರದಲ್ಲಿವೆ 20 ಸಾವಿರಕ್ಕೂ ಅಧಿಕ ಗುಂಡಿಗಳು:20 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳಿವೆ ಎಂದು ಸಮೀಕ್ಷೆಯೊಂದು ಹೇಳಿದೆ. ವಾರದೊಳಗೆ ರಸ್ತೆ ಗುಂಡಿ ಮುಚ್ಚಲು ಗುರಿಯನ್ನು ಬಿಬಿಎಂಪಿ ಇಟ್ಟುಕೊಂಡಿದೆ. ಯಲಹಂಕದಲ್ಲಿ ಬಿಬಿಎಂಪಿ ತನ್ನ ಸ್ವಂತ ಡಾಂಬರು ಘಟಕವನ್ನು ಹೊಂದಿದೆ. ಇದಲ್ಲದೆ, ಯಲಹಂಕ, ದಕ್ಷಿಣ, ಪಶ್ಚಿಮ, ಪೂರ್ವ ವಲಯದಲ್ಲಿ ಖಾಸಗಿಯವರಿಂದ ತಲಾ ಒಂದು ಘಟಕವನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.