ಬೆಂಗಳೂರು: ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು 7 ಸಾವಿರ ಕೋಟಿ ರೂ ಖರ್ಚು ಮಾಡಿರುವ ಆಪಾದನೆ ಸತ್ಯಕ್ಕೆ ದೂರವಾದ ಮಾತಾಗಿದೆ. ಮತ್ತು ಈ ಆರೋಪ ಹಾಸ್ಯಾಸ್ಪದವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಳ್ಳಿಹಾಕಿದ್ದಾರೆ. ಈ ಬಗ್ಗೆ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ತುಷಾರ್ ಗಿರಿನಾಥ್, 3 ವರ್ಷದಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು 7 ಸಾವಿರ ಕೋಟಿ ರೂ ಖರ್ಚು ಮಾಡಿರುವ ಪ್ರಕರಣ ಸಂಬಂಧ ಆಪಾದನೆ ಸುಳ್ಳು. ರಸ್ತೆ ಗುಂಡಿಗಳಿಗೆ 7 ಸಾವಿರ ಕೋಟಿ ಖರ್ಚು ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಬಿಬಿಎಂಪಿ ಸಂಪೂರ್ಣ ಬಜೆಟ್ ಮೊತ್ತವೇ ಸುಮಾರು 7 ಸಾವಿರ ಕೋಟಿಯಾಗಿದೆ. ಸುಳ್ಳು ಸುದ್ದಿ ಹಬ್ಬಿಸಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಪಪ್ರಚಾರಕ್ಕೆ ನಾಗರಿಕರು ಕಿವಿಗೊಡಬೇಡಿ ಎಂದು ಅವರು ಇದೇ ವೇಳೆ ಮನವಿ ಮಾಡಿದರು.
ನಾನು ಸುಮಾರು ಸಲ ಕರಸ್ಪಾಂಡೆಂಟ್ಗಳಿಗೂ ಹೇಳಿದ್ದೆ. ಈ ತರಹ 7,129 ಸಾವಿರ ಕೋಟಿಯನ್ನು ಖರ್ಚು ಮಾಡಿರುವುದಾಗಿ ಹೇಳುತ್ತಿದ್ದೀರಿ. ಅಷ್ಟೊಂದು ಹಣವನ್ನು ನಾವು ರಸ್ತೆ ಗುಂಡಿ ಮುಚ್ಚಲು ಹೋದ್ರೆ ಆಗುತ್ತದೆಯೇ? ಮುಖ್ಯವಾಗಿ ನಮ್ಮ ಬಳಿ ಅಷ್ಟು ಹಣವೇ ಇಲ್ಲ. ಕಳೆದ ಮೂರು ವರ್ಷದಲ್ಲಿ ನಾವು ಖರ್ಚು ಮಾಡಿರುವುದು 119.23 ಕೋಟಿ ಅಷ್ಟೇ. ಕಳೆದ ವರ್ಷ 59 ಕೋಟಿ ಖರ್ಚಾಗಿತ್ತು, ಅದಕ್ಕಿಂತ ಹಿಂದೆ ಅಂದಾಜು 40 ಕೋಟಿ ಖರ್ಚಾಗಿತ್ತು. ಈ ವರ್ಷ 36 ಕೋಟಿ ಖರ್ಚು ಮಾಡುತ್ತೇವೆ ಎಂದರು.
ಫ್ಲೆಕ್ಸ್ ಹಾಕದಂತೆ ಸುಪ್ರೀಂಕೋರ್ಟ್ನಿಂದ ಆದೇಶವಿದ್ದರೂ ಕೂಡಾ ಬೆಂಗಳೂರಿನಲ್ಲಿ ಫ್ಲೆಕ್ಸ್ ರಾರಾಜಿಸುತ್ತಿವೆ. ಇದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಇವರೇನು ರಾಜಕಾರಣಿಗಳಿಗೆ ಹೆದರುತ್ತಿದ್ದಾರಾ ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಅವರು ತ್ವರಿತವಾಗಿ ಬ್ಯಾನರ್‌ಗಳನ್ನು ತೆರವು ಮಾಡುತ್ತಿದ್ದಾರೆ. ಆದರೆ. ವಲಯವಾರು ಕನಿಷ್ಠ 10 ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಸೂಚನೆ ಕೂಡಾ ನೀಡಿದ್ದೇನೆ ಎಂದರು.