ಬೆಂಗಳೂರು: ಚಾಮರಾಜಪೇಟೆಯ ಮೈದಾನ ಬಿಬಿಎಂಪಿ ಸ್ವತ್ತಲ್ಲ ಎನ್ನುವ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ವಕ್ಫ್ ಬೋರ್ಡ್ ಬಳಿ ದಾಖಲೆ ಇದ್ದರೆ ಖಾತಾ ಮಾಡಿಕೊಡಲಾಗುವುದು. ದಾಖಲೆ ಇದ್ದರೆ ನೀಡಿ ಎಂದು ನಾನು ಹೇಳಿದ್ದೇನೆಯೇ ಹೊರತು ಸ್ವತ್ತಲ್ಲ ಎಂದು ಹೇಳಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬಿಬಿಎಂಪಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನದ ಬಗ್ಗೆ ಸದ್ಯದ ಸುಪ್ರೀಂಕೋರ್ಟಿನ ಆದೇಶ ಪ್ರಕಾರ, ಮಕ್ಕಳ ಕ್ರೀಡಾ ಚಟುವಟಿಕೆ ಹಾಗೂ ಮುಸ್ಲಿಮರ ಪ್ರಾರ್ಥನೆಗೆ ಮಾತ್ರ ಅವಕಾಶ ಇದೆ ಎಂದರು.
1965ರಲ್ಲಿ ವಕ್ಫ್ ಬೋರ್ಡ್‌ನಿಂದ ಅಧಿಸೂಚನೆ: 1965ರಲ್ಲಿ ವಕ್ಫ್ ಬೋರ್ಡ್ ಹೊರಡಿಸಿದ ಅಧಿಸೂಚನೆಯಲ್ಲಿ ಸುನ್ನಿ ಬೋರ್ಡ್ಗೆ ಸೇರಿದ ಜಾಗ ಎಂದು ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ಇದುವರೆಗೂ ಇದು ನಮ್ಮ ಜಾಗ ಎಂದು ವಕ್ಫ್ ಬೋರ್ಡ್ ಸಹ ದಾಖಲೆ ನೀಡಿಲ್ಲ. 1974ರಲ್ಲಿ ಸಮೀಕ್ಷೆ ನಡೆದಾಗಲೂ ವಕ್ಫ್ ಬೋರ್ಡ್ ಆಕ್ಷೇಪಣೆ ಸಲ್ಲಿಸಿಲ್ಲ. ಮಾಲೀಕರು ಯಾರೇ ಇದ್ದರೂ ಕಾನೂನುಬದ್ಧವಾಗಿ ಖಾತಾ ಮಾಡಿಕೊಡುತ್ತೇವೆ ಎಂದು ತಿಳಿಸಿದರು.