ಬೆಂಗಳೂರು : ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ನೀಡಲಾಗಿರುವ ಕಾರ್ಯಸೂಚಿಯಂತೆ ಬೃಹತ್ ನೀರುಗಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರರು 10 ದಿನಗಳಲ್ಲಿ ಹೊಸ ಒತ್ತುವರಿಗಳನ್ನು ಗುರುತಿಸಬೇಕಿದ್ದು, ಇದು ಕೊನೆಯ ಅವಕಾಶವಾಗಿರುತ್ತದೆ. ಒಂದು ವೇಳೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡುವಲ್ಲಿ ವಿಫಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆ ವಿಭಾಗ ಹಾಗೂ ಕೆರೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ, ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳು ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೃಹತ್ ನೀರುಗಾಲುವೆ ಒತ್ತುವರಿಯಾಗಿದ್ದಲ್ಲಿ ಅದನ್ನು ಭೂಮಾಪಕರ ಮೂಲಕ ಸಮೀಕ್ಷೆ ನಡೆಸಬೇಕು. ಬಳಿಕ ತಹಶೀಲ್ದಾರರ ಮೂಲಕ ಒತ್ತುವರಿದಾರರಿಗೆ ನೋಟಿಸ್ ನೀಡಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೃಹತ್ ನೀರು ಗಾಲುವೆಯ ಒತ್ತುವರಿ ತೆರವು ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ಆಯಾ ವಿಭಾಗಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಅವರು ತೆರವು ನೋಟೀಸ್ ಜಾರಿ ಮಾಡಬೇಕು. ನಂತರ ಆಯಾ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ರಾಜಕಾಲುವೆಯ ಒತ್ತುವರಿ ಮತ್ತು ಅತಿಕ್ರಮಣ ತೆರವು ಜವಾಬ್ದಾರಿ ನೀಡಲಾಗುತ್ತದೆ. ನಿಗದಿತ ಸಮಯದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಸೂಚಿಸಿದರು.
ಕೆರೆಗಳ ಒತ್ತುವರಿ ತೆರವು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಯಾವ್ಯಾವ ಕೆರೆಯಲ್ಲಿ ಒತ್ತುವರಿಯಾಗಿದೆ ಎಂಬುದರ ಬಗ್ಗೆ ಕೆರೆಗಳ ವಿಭಾಗದ ಕಾರ್ಯಪಾಲಕ ಅಭಿಯಂತರರು 3 ದಿನಗಳಲ್ಲಿ ಆಯಾ ವಲಯ ಉಪ ವಿಭಾಗಗಳಲ್ಲಿ ಬರುವ ಕಾರ್ಯಪಾಲಕ ಅಭಿಯಂತರರಿಗೆ 7 ದಿನದೊಳಗಾಗಿ ಒತ್ತುವರಿ ಬಗ್ಗೆ ಖಚಿತ ಮಾಹಿತಿ ನೀಡಬೇಕು. ಆ ಬಳಿಕ ತಹಶೀಲ್ದಾರರು 7 ದಿನಗಳಲ್ಲಿ ಸರ್ವೇ ನಡೆಸಿ ಒತ್ತುವರಿಯಾಗಿದ್ದರೆ, ಒತ್ತುವರಿ ಮಾಡಿರುವವರಿಗೆ ನೋಟಿಸ್ ಜಾರಿಗೊಳಿಸಬೇಕು. ಅನಂತರ ಸಕ್ಷಮ ಪ್ರಾಕಾರದಡಿ ಕಾಲಾವಕಾಶ ನೀಡಿ ಆ ಸಮಯದಲ್ಲಿ ಒತ್ತುವರಿ ತೆರವಾಗದಿದ್ದಲ್ಲಿ ಕೂಡಲೇ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ತಾಕೀತು ಮಾಡಿದರು.
ಪ್ರವಾಹ ಪೀಡಿದ ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ವ್ಯವಸ್ಥೆ :ನಗರದಲ್ಲಿ 198 ಪ್ರವಾಹ ಪೀಡಿದ ಸೂಕ್ಷ್ಮ ಪ್ರದೇಶಗಳ ಪೈಕಿ 124 ಸ್ಥಳಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಾಕಿ 74 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಮಳೆಗಾಲದ ವೇಳೆ ಯಾವುದೇ ರೀತಿಯ ಸಮಸ್ಯೆಯಾಗದಿರಲು ಆಯಾ ವಲಯ ವ್ಯಾಪ್ತಿಯ ಪಾಲಿಕೆ ಹಿರಿಯ ಅಧಿಕಾರಿಗಳು ಪ್ರಮುಖ ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ, ಆ ಸ್ಥಳಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.
ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ :ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ಆಯಾ ವಲಯದ ಎಲ್ಲ ಮುಖ್ಯ ಅಭಿಯಂತರರು ಸೂಕ್ತ ಕ್ರಮಗಳನ್ನು ಕೈಗೊಂಡು ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚಿಸಿದರು. ಸಭೆಯಲ್ಲಿ ವಿಶೇಷ ಆಯುಕ್ತ ಜಯರಾಮ್ ರಾಯಪುರ, ಡಾ. ತ್ರಿಲೋಕ್ ಚಂದ್ರ, ಡಾ. ಹರೀಶ್ ಕುಮಾರ್, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಹ್ಲಾದ್ ಹಾಗೂ ಇತರರಿದ್ದರು.
ಇದನ್ನೂ ಓದಿ :ಗಂಗಾ ಕಲ್ಯಾಣ: ಬಾಕಿ ಇರುವ ಅರ್ಜಿಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ: ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ