ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ, ಬೀದಿಗಳಲ್ಲಿ ಕಸ ಗುಡಿಸುವ, ಬ್ಲಾಕ್ ಸ್ಪಾಟ್ಸ್ (ಕಸ ಸುರಿಯುವ ಸ್ಥಳ)ಗಳನ್ನು ಕಡಿಮೆ ಮಾಡುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತರು ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಸ ವಿಲೇವಾರಿ ಪದ್ಧತಿಯನ್ನು ಸರಿಯಾದ ಅನುಕ್ರಮದಲ್ಲಿ ಪಾಲಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ನೆಲಮಟ್ಟದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಬೇಕು. ಹಸಿ ಕಸ, ಒಣ ಕಸ ವಿಂಗಡಿಸಿಕೊಂಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಆಯುಕ್ತರು ತಿಳಿಸಿದರು.
ಪೌರಕಾರ್ಮಿಕರಿಗೆ ಸುರಕ್ಷಾ ಸಾಮಗ್ರಿಗಳನ್ನು ನೀಡಿ, ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಸುರಕ್ಷಾ ಸಾಮಗ್ರಿಗಳನ್ನು ಬಳಸುವ ತಿಳುವಳಿಕೆ ನೀಡಬೇಕು. ರಸ್ತೆ ಬದಿಗಳಲ್ಲಿ ಕಸ ಬಿಸಾಡದಂತೆ ಜನರಲ್ಲಿ ಅರಿವು ಮೂಡಿಸಬೇಕು. ರಸ್ತೆ ಬದಿ ಬಿಸಾಡುವ ಅಥವಾ ಬ್ಲಾಕ್ ಸ್ಪಾಟ್ಗಳಾಗಿರುವ ಸ್ಥಳಗಳ ಮೇಲೆ ಮಾರ್ಷಲ್ಗಳು ನಿಗಾವಹಿಸಬೇಕು. ಆಟೋ ಟಿಪ್ಪರ್ಗಳಿಗೆ ಕಸ ಕೊಡದೆ ಬಿಸಾಡುವಂತಹವರಿಗೆ ದಂಡ ವಿಧಿಸಿ, ಮತ್ತೊಮ್ಮೆ ಕಸ ಎಸೆಯದಂತೆ ಬೆಳಗಿನ ಜಾವ ಬರುವ ಆಟೋ ಟಿಪ್ಪರ್ಗೆ ಕಸ ನೀಡುವಂತೆ ಸೂಚಿಸಬೇಕು. ಇದೆಲ್ಲದರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ವಿಶೇಷ ಆಯುಕ್ತ(ಘನತ್ಯಾಜ್ಯ) ಡಾ. ಹರೀಶ್ ಕುಮಾರ್, ಎಲ್ಲಾ ವಲಯ ಆಯುಕ್ತರುಗಳು, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್, ಎಲ್ಲಾ ವಲಯ ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯ ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ಹೆಲಿಕಾಪ್ಟರ್ ಪತನ: ಕೇವಲ 29ರ ಹರೆಯದಲ್ಲೇ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ನಿಧನ