ಬೆಂಗಳೂರು: ನಗರದ ಪೂರ್ವ ವಲಯದಲ್ಲಿನ ಕೆಲ ಪ್ರದೇಶಗಳ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಹಾಗೂ ಯಲಹಂಕ ವಲಯದಲ್ಲಿನ ವಿದ್ಯುತ್ ಚಿತಾಗಾರಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಭೇಟಿ ನೀಡಿ ತಪಾಸಣೆ ನಡೆಸಿದರು.
ಕೋವಿಡ್ ಆರೈಕೆ ಕೇಂದ್ರ(CCC) ಸ್ಥಾಪನೆ:ಪಶುವೈದ್ಯ ಮಹಾವಿದ್ಯಾಲಯ ಆವರಣದಲ್ಲಿರುವ ಕೇಂದ್ರದಲ್ಲಿ ತುರ್ತಾಗಿ ಕೋವಿಡ್ ಕೇರ್ ಸೆಂಟರ್‌ನ್ನು ಸುಮಾರು 50-60 ಹಾಸಿಗೆಯುಳ್ಳ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಂತೆ ನಾಳೆ ಸಂಜೆ ಒಳಗಾಗಿ ಸಿದ್ಧಪಡಿಸಿ ಸೌಲಭ್ಯ ಒದಗಿಸುವಂತೆ ಸ್ಥಳದಲ್ಲಿ ಹಾಜರಿದ್ದ ವಲಯ ಆಯುಕ್ತ ಮನೋಜ್ ಜೈನ್, ಜಂಟಿ ಆಯುಕ್ತೆ ಪಲ್ಲವಿ ಅವರಿಗೆ ಸೂಚಿಸಿದರು.
ಸಂಜಯನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ: ಬಿಬಿಎಂಪಿಯ ಸಂಜಯನಗರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಕೈಗೊಂಡಿರುವ ಕಾರ್ಯಗಳನ್ನು ಪರಿಶೀಲಿಸಿ, ಸದರಿ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಸಂಸ್ಥೆಯ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಟೆಸ್ಟಿಂಗ್, ವ್ಯಾಕ್ಸಿನೇಷನ್ ಕೇಂದ್ರಗಳನ್ನು ಸ್ಥಾಪಿಸುವಂತೆ ಸೂಚಿಸಿದರು. ಅಲ್ಲದೆ, ಯಾವುದೇ ಕಾರಣಕ್ಕೂ ಸಾರ್ವಜನಿಕರು ಸರದಿಯಲ್ಲಿ ನಿಲ್ಲದಂತೆ ಹೆಚ್ಚುವರಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿರುವ ಅವರು, ಪ್ರಾಥಮಿಕ-ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಟೆಸ್ಟಿಂಗ್ ಹಾಗೂ ಫಲಿತಾಂಶ ಬರುವವರೆಗೂ ಹೋಮ್ ಐಸೋಲೇಷನ್‌ನಲ್ಲಿರುವಂತೆ ಸೂಚಿಸುವ ಬಗ್ಗೆ ತಿಳಿಹೇಳಿದರು.