ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆಗಳ ಅವ್ಯವಸ್ಥೆಯಿಂದ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಬಿಬಿಎಂಪಿ ರಸ್ತೆಗಳನ್ನು ಬೇಕಾಬಿಟ್ಟಿ ಅಗೆಯುತ್ತಿರುವ ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಠಾಣಾಧಿಕಾರಿಗಳಿಗೆ ಸೂಚಿಸಬೇಕು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಮನವಿ ಮಾಡಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ಭೀಕರ ಅಪಘಾತ: ಶಿಕ್ಷಕಿ ತಲೆ ಮೇಲೆ ಹರಿದ ಗೂಡ್ಸ್ ವಾಹನ:
ಬಿಬಿಎಂಪಿಯಿಂದ ಅನುಮತಿ ಪಡೆಯದೇ ಒಎಫ್ಸಿ ಕೇಬಲ್ (ಆಪ್ಟಿಕಲ್ ಫೈಬರ್ ಕೇಬಲ್) ಅಳವಡಿಸುತ್ತಿರುವ ಬೆಸ್ಕಾಂ ಮತ್ತು ನಗರದ ಸುತ್ತಲಿನ 110 ಹಳ್ಳಿಗಳಿಗಾಗಿ ನೀರಿನ ವ್ಯವಸ್ಥೆ ಕಲ್ಪಿಸಲು ಬೇಕಾ ಬಿಟ್ಟಿ ರಸ್ತೆ ಅಗೆದಿರುವ ಜಲಮಂಡಳಿ ಸಮಸ್ಯೆಗೆ ಮೂಲ ಕಾರಣ ಎಂದು ಮನವಿ ಪತ್ರದಲ್ಲಿ ದೂರಿದೆ. ರಸ್ತೆ ಸಮಸ್ಯೆಯ ವರದಿ ಸಂಗ್ರಹಿಸಿ ಬೆಸ್ಕಾಂ ಮತ್ತು ಬಿಡಬ್ಲ್ಯೂಎಸ್ಎಸ್ಎಸ್ಬಿ ವಿರುದ್ಧ ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ ದೂರು ಕೊಡಲು ಪಾಲಿಕೆ ಇಂಜಿನಿಯರ್ಗಳಿಗೆ ಸೂಚನೆ ನೀಡಿದೆ.
ಬಿಡಬ್ಲ್ಯೂಎಸ್ಎಸ್ಎಸ್ಬಿ, ಬೆಸ್ಕಾಂ ನೇರ ಕಾರಣ: ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಲಿಕೆಯ ಚೀಫ್ ಇಂಜಿನಿಯರ್ ಪ್ರಹ್ಲಾದ್ ರಸ್ತೆಗಳ ಸಮಸ್ಯೆಗೆ ಬಿಡಬ್ಲ್ಯೂಎಸ್ಎಸ್ಎಸ್ಬಿ ಹಾಗೂ ಬೆಸ್ಕಾಂ ನೇರ ಕಾರಣ. ಅಲ್ಲದೇ ಬಿಬಿಎಂಪಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ, ರಸ್ತೆ ನಿರ್ಮಿಸುತ್ತಿದೆ. ಆದರೆ, ರಾತ್ರೋರಾತ್ರಿ ಬೆಸ್ಕಾಂ, ಜಲಮಂಡಳಿ ಹೇಳದೇ ಕೇಳದೆ ರಸ್ತೆ ಕಿತ್ತು ಹಾಕುತ್ತಿದೆ ಎಂದು ದೂರಿದರು.