ಬೆಂಗಳೂರು: ಪ್ರತಿವರ್ಷವೂ ಬಿಬಿಎಂಪಿ ವತಿಯಿಂದ ನಾಡಪ್ರಭು ಕೆಂಪೇಗೌಡ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸೆಪ್ಟೆಂಬರ್ 2ರಂದು ಸರಳವಾಗಿ ಕೆಂಪೇಗೌಡ ದಿನಾಚರಣೆಯನ್ನು ಆಚರಿಸಲು ಪಾಲಿಕೆ ನಿರ್ಧರಿಸಿದೆ.
ಕೆಂಪೇಗೌಡ ದಿನಾಚರಣೆಗೆ ಬಿಬಿಎಂಪಿಯಿಂದ ಮುಹೂರ್ತ: ಸರಳ ಆಚರಣೆಗೆ ಸಿದ್ಧತೆ
ಆಗಸ್ಟ್ 31ರ ಬಳಿಕ ಕೇಂದ್ರ ಸರ್ಕಾರದ ಕೋವಿಡ್ ಮಾರ್ಗಸೂಚಿ ನೋಡಿಕೊಂಡು ಸಮಾರಂಭ ನಡೆಸಲಾಗುವುದು ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ. ಇದಲ್ಲದೆ ಈ ಬಾರಿ ಪ್ರಶಸ್ತಿ ವಿತರಣೆಯನ್ನೂ ವಿಶೇಷ ರೀತಿಯಾಗಿ ಕೊರೊನಾ ವಾರಿಯರ್ಗಳಿಗೆ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಪ್ರಶಸ್ತಿ ಆಯ್ಕೆಗೆ ಈ ಬಾರಿ ವಿಶೇಷ ಮಾನದಂಡ ಇದ್ದು, ಕೊರೊನಾ ವಾರಿಯರ್ಸ್ಗೆ ಕೆಂಪೇಗೌಡ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಕೋವಿಡ್ ಕರ್ತವ್ಯ ನಿರ್ವಹಿಸುವ ವೇಳೆ ಮೃತಪಟ್ಟ ಅಧಿಕಾರಿಗಳ ಕುಟುಂಬದವರನ್ನು ಕರೆಸಿ, ಕೃತಜ್ಞತೆಗಾಗಿ ಸನ್ಮಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹೇಳಿದ್ರು.
ಆಗಸ್ಟ್ 31ರ ಬಳಿಕ ಕೇಂದ್ರ ಸರ್ಕಾರದ ಮಾರ್ಗಸೂಚಿ ನೋಡಿಕೊಂಡು ಸಮಾರಂಭ ನಡೆಸಲಾಗುವುದು ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು. ಬುಧವಾರ ಕೆಂಪೇಗೌಡ ಜಯಂತಿ ಆಚರಣೆ ಕುರಿತು ಸಭೆ ನಡೆಸಲಾಗಿತ್ತು. ಇನ್ನು ಮುಂದಿನ ಸಭೆಯನ್ನು 29ಕ್ಕೆ ನಡೆಸಲಾಗುತ್ತಿದ್ದು, ಎಷ್ಟು ಜನರಿಗೆ ಹಾಗೂ ಯಾರಿಗೆಲ್ಲಾ ಪ್ರಶಸ್ತಿ ನೀಡಲಾಗುವುದು ಎಂಬುದರ ಕುರಿತು ನಿರ್ಧಾರ ಆಗಲಿದೆ. ಕೇಂದ್ರ ಕಚೇರಿಯ ಸಮಾರಂಭಕ್ಕೂ ಕಡಿಮೆ ಸಂಖ್ಯೆಯಲ್ಲಿ ಜನರನ್ನು ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.